ಅಕೌಂಟೆಂಟ್ ಹುದ್ದೆಗೆ ಪರೀಕ್ಷೆ ಬರೆದಿದ್ದು 8,000 ಅಭ್ಯರ್ಥಿಗಳು, ಒಬ್ಬ ಕೂಡ ಪಾಸಾಗಲಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

exam
ಪಣಜಿ, ಆ.22-ಇದು ಸರ್ಕಾರದ ಲೋಪದೋಷವೋ ಅಥವಾ ವಿದ್ಯಾರ್ಥಿಗಳ ಬೇಜವಾಬ್ದಾರಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಲು ಪ್ರವೇಶ ಪರೀಕ್ಷೆಯಲ್ಲಿ ಹಾಜರಾದ ಎಲ್ಲ 8,000 ಅಭ್ಯರ್ಥಿಗಳು ಸಾಮೂಹಿಕವಾಗಿ ಢುಮ್ಕಿ ಹೊಡೆದಿದ್ದಾರೆ. ಈ ಸಂಗತಿ ಗೋವಾದಿಂದ ವರದಿಯಾಗಿದೆ.  ಗೋವಾ ಸರ್ಕಾರದ ಲೆಕ್ಕಪತ್ರಗಳ ನಿರ್ದೇಶನಾಲಯವು ಅಕೌಂಟೆಂಟ್ ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು. 80 ಹುದ್ದೆಗಳಿಗೆ 11,000 ಮಂದಿ ಅರ್ಜಿ ಹಾಕಿದ್ದರು. ವಾಣಿಜ್ಯ ಅಥವಾ ಅರ್ಥಶಾಸ್ತ್ರದೊಂದಿಗೆ ಕಲಾ ವಿಭಾಗದ ಪದವೀಧರರನ್ನು ಪ್ರವೇಶ ಪರೀಕ್ಷೆಗೆ ಆಯ್ಕೆ ಮಾಡಲಾಗಿತ್ತು. ಇವರಲ್ಲಿ ಸುಮಾರು 8,000 ಅಭ್ಯರ್ಥಿಗಳು ಎಂಟ್ರನ್ಸ್ ಎಕ್ಸಾಮ್‍ಗೆ ಅರ್ಹತೆ ಪಡೆದರು. 100 ಮಾಕ್ರ್ಸ್‍ನ ಈ ಪರೀಕ್ಷೆಯಲ್ಲಿ ತೇರ್ಗಡೆಗೆ ಕನಿಷ್ಠ 50 ಅಂಕಗಳನ್ನು ನಿಗದಿಗೊಳಿಸಲಾಗಿತ್ತು.

ಆದರೆ ಪರೀಕ್ಷೆ ಫಲಿತಾಂಶ ಬಂದ ನಂತರ ವಿದ್ಯಾರ್ಥಿಗಳೊಂದಿಗೆ ಸರ್ಕಾರಕ್ಕೂ ಅಚ್ಚರಿಯಾಯಿತು. ಕಾರಣ ಬಹುತೇಕ 8,000 ಅಭ್ಯರ್ಥಿಗಳು ಫೇಲಾಗಿದ್ದರು.
ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಭ್ಯರ್ಥಿಗಳು ಇಲಾಖೆಯಲ್ಲೇ ಏನೋ ಲೋಪದೋಷವಾಗಿದೆ. ಇಷ್ಟು ಜನರು ಸಾಮೂಹಿಕವಾಗಿ ಢುಮ್ಕಿ ಹೊಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪ ತಳ್ಳಿ ಹಾಕಿರುವ ಸರ್ಕಾರಿ ಉನ್ನತಾಧಿಕಾರಿಗಳು ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸಿಲ್ಲ. ಹೀಗಾಗಿ ಫಲಿತಾಂಶ ವ್ಯತಿರಿಕ್ತವಾಗಿದೆ ಎಂದು ಕೈ ತೊಳೆದುಕೊಂಡಿದ್ದಾರೆ.

Facebook Comments

Sri Raghav

Admin