ದಕ್ಷಿಣದಲ್ಲಿ ಅತಿವೃಷ್ಟಿ, ಉತ್ತರದಲ್ಲಿ ಅನಾವೃಷ್ಟಿ..! ಇದು ರಾಜ್ಯದ ಸದ್ಯದ ಪರಿಸ್ಥಿತಿ..!

ಈ ಸುದ್ದಿಯನ್ನು ಶೇರ್ ಮಾಡಿ

Rain
ಬೆಂಗಳೂರು,ಆ.22- ಕೊಡಗು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ರಾಜ್ಯದ ಒಳನಾಡಿನಲ್ಲಿ ಮಳೆ ಕೊರತೆ ಉಂಟಾಗಿ ಬರ ಪರಿಸ್ಥಿತಿ ತಲೆದೋರಿದೆ.  ರಾಜ್ಯದ ಬರಪೀಡಿತ ಪ್ರದೇಶಗಳನ್ನು ಗುರುತಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆಗಸ್ಟ್ ತಿಂಗಳ ಅಂತ್ಯಕ್ಕೆ ಬರ ಪೀಡಿತ ಪ್ರದೇಶಗಳನ್ನು ಸರ್ಕಾರ ಘೋಷಿಸಲು ಉದ್ದೇಶಿಸಿದೆ. ಈಗಾಗಲೇ ಅಧಿಕಾರಿಗಳು ತಮ್ಮ ತಮ್ಮ ಜಿಲ್ಲೆಯಲ್ಲಿ ಮಳೆ ಪ್ರಮಾಣ, ಬಿತ್ತನೆ ಹಾಗೂ ಬೆಳೆಯ ಸ್ಥಿತಿಗತಿಯ ಬಗ್ಗೆ ಮಾಹಿತಿಯನ್ನು ಕಲೆ ಹಾಕತೊಡಗಿದ್ದಾರೆ.  ಕಳೆದ ಜೂನ್ 1ರಿಂದ ಇದುವರೆಗೂ ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ. 75 ತಾಲ್ಲೂಕುಗಳ 317 ಹೋಬಳಿಗಳಲ್ಲಿ ಮಳೆ ಕೊರತೆ ಕಂಡುಬಂದಿದೆ. ಕೆಲವೆಡೆ ಬಿತ್ತನೆ ಕಾರ್ಯಕ್ಕೂ ಹಿನ್ನೆಡೆಯಾಗಿದ್ದರೆ ಮತ್ತೆ ಕೆಲವೆಡೆ ಬಿತ್ತಿದ ಬೆಳೆಯು ಮಳೆ ಇಲ್ಲದೆ ಒಣಗುತ್ತಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂ.1ರಿಂದ ಆ.19ರವರೆಗೆ ರಾಜ್ಯದಲ್ಲಿ ವಾಡಿಕೆ ಮಳೆ ಪ್ರಮಾಣ 615 ಮಿ.ಮೀ ಆದರೆ 657 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.7ರಷ್ಟು ಹೆಚ್ಚು ಮಳೆಯಾಗಿದೆ.  ಕರಾವಳಿ ಭಾಗದಲ್ಲಿ ಶೇ.10ರಷ್ಟು, ಮಲೆನಾಡು ಭಾಗದಲ್ಲಿ ಶೇ.33ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಈ ಅವಧಿಯಲ್ಲಿ 305 ಮಿ.ಮೀನಷ್ಟು ವಾಡಿಕೆ ಮಳೆಯಾಗಬೇಕಿತ್ತು. ಆದರೆ 221 ಮಿ.ಮೀನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.28ರಷ್ಟು ಕೊರತೆ ಕಂಡುಬಂದಿದೆ. ಕಳೆದ ವರ್ಷವೂ ಕೂಡ ಇದೇ ಅವಧಿಯಲ್ಲಿ ಶೇ.27ರಷ್ಟು ಮಳೆ ಕೊರತೆಯಾಗಿತ್ತು. ದಕ್ಷಿಣ ಒಳನಾಡಿನಲ್ಲೂ ವಾಡಿಕೆ ಮಳೆ ಪ್ರಮಾಣ 192 ಮಿ.ಮೀನಷ್ಟಿದ್ದು, 188 ಮಿ.ಮೀನಷ್ಟು ಮಳೆಯಾಗಿದೆ. ಈ ಭಾಗದಲ್ಲೂ ಶೇ.2ರಷ್ಟು ಮಳೆ ಕೊರತೆ ಉಂಟಾಗಿದೆ.
ರಾಜ್ಯದ 27 ತಾಲ್ಲೂಕು, 166 ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ವರದಿಯಾಗಿದೆ. 74 ತಾಲ್ಲೂಕುಗಳ 299 ಹೋಬಳಿಗಳಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದೆ. 75 ತಾಲ್ಲೂಕು 317 ಹೋಬಳಿಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, 15 ಹೋಬಳಿಗಳಲ್ಲಿ ಮಳೆಯ ತೀವ್ರ ಕೊರತೆ ಕಂಡುಬಂದಿದೆ.

ಮುಂಗಾರು ಹಂಗಾಮಿನಲ್ಲಿ 74.69 ಲಕ್ಷ ಹೆಕ್ಟೇರ್‍ನಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಇದುವರೆಗೂ 53.83 ಲಕ್ಷ ಹೆಕ್ಟೇರ್‍ನಲ್ಲಿ ಮಾತ್ರ ಬಿತ್ತನೆಯಾಗಿದೆ.
ರಾಯಚೂರು ಶೇ.50, ವಿಜಯಪುರ ಶೇ.43, ಯಾದಗಿರಿ ಶೇ.40, ಗದಗ ಶೇ.36, ಬೆಂಗಳೂರು ನಗರ ಶೇ.30, ಬೀದರ್ ಶೇ.29, ಚಿಕ್ಕಬಳ್ಳಾಪುರ, ಕಲಬುರಗಿ, ಕೊಪ್ಪಳ ಶೇ.27ರಷ್ಟು , ಬಳ್ಳಾರಿ ಶೇ.26, ಬಾಗಲಕೋಟೆ, ಹಾವೇರಿ ಶೇ.23ರಷ್ಟು ಮಳೆ ಕೊರತೆಯನ್ನು ಎದುರಿಸುತ್ತಿವೆ.  ದಕ್ಷಿಣ ಕರ್ನಾಟಕದ ಚಿಂತಾಮಣಿ, ಹೊಸಕೋಟೆ, ಮಾಲೂರು, ಮುಳಬಾಗಿಲು, ಕೊರಟಗೆರೆ, ಕುಣಿಗಲ್, ಕೋಲಾರ, ಬಂಗಾರಪೇಟೆ, ಚಿಕ್ಕಬಳ್ಳಾಪುರ, ಆನೇಕಲ್, ಶ್ರೀನಿವಾಸಪುರ, ಬಾಗೇಪಲ್ಲಿ, ಗುಡಿಬಂಡೆ, ಶಿಢ್ಲಘಟ್ಟ, ಬೆಂಗಳೂರು ಉತ್ತರ, ದಕ್ಷಿಣ, ಬೆಂಗಳೂರು ಪೂರ್ವ ತಾಲ್ಲೂಕುಗಳು ಕೂಡ ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಬರದ ಛಾಯೆ ಆವರಿಸುವ ಸಾಧ್ಯತೆಗಳಿವೆ

Facebook Comments

Sri Raghav

Admin