ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಪತ್ನಿ ವಿಧಿವಶ, ಗಣ್ಯರ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

JDS--01

ಚಿಕ್ಕಮಗಳೂರು, ಆ. 22 : ಕಡೂರಿನ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಅವರ ಪತ್ನಿ ನಿರ್ಮಲಾ‌ ಅವರು ಬುಧವಾರ ನಿಧನರಾಗಿದ್ದಾರೆ. 60 ವರ್ಷ ವಯಸ್ಸಿನ ನಿರ್ಮಲಾ ಅವರು ಬೆಂಗಳೂರಿನಲ್ಲಿರುವ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರಿಗೆ ಪತಿ ವೈ.ಎಸ್.ವಿ.ದತ್ತ ಹಾಗೂ ಒಬ್ಬ ಮಗಳಿದ್ದಾರೆ. ಗುರುವಾರ ಬೆಳಗ್ಗೆ 10 ಗಂಟೆ ತನಕ ಬೆಂಗಳೂರಿನಲ್ಲಿರುವ ರಾಜಾಜಿನಗರದಲ್ಲಿರುವ ದತ್ತ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗುರುವಾರ ಸಂಜೆ 4 ಗಂಟೆಗೆ ಕಡೂರು ತಾಲೂಕಿನ ಯಗಟಿ ಗ್ರಾಮದ‌ಲ್ಲಿರುವ ದತ್ತ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

# ಮಾಜಿ ಪ್ರಧಾನಿ ದೇವೇಗೌಡ ಅಂತಿಮ ದರ್ಶನ :
ಶಂಕರಪುರಂನ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಪತ್ನಿ ನಿರ್ಮಲಾ ಅವರ ಅಂತಿಮ ದರ್ಶನ ಪಡೆದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ. ದತ್ತ ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.  ಅಂತಿಮ ದರ್ಶನದ ನಂತರ ದೇವೇಗೌಡ ಹೇಳಿಕೆ- 30 ವರ್ಷದ ಹಿಂದೆ ದತ್ತ ಅವರ ಮದುವೆಗೆ ಹೋಗಿದ್ದೆ. ನಂತರ ಏಳು ತಿಂಗಳೇ ಹುಟ್ಟಿದ್ದ ಮಗಳನ್ನು ಉಳಿಸಿಕೊಳ್ಳಲು ದತ್ತ ನಡೆಸಿದ ಹೋರಾದ ಸಂದರ್ಭದಲ್ಲೂ ದತ್ತನ ಜತೆಗಿದ್ದೆ. ಈಗ ಮಗಳು ದೊಡ್ಡವಳಾಗಿ ಅಮೆರಿಕದಲ್ಲಿ ವ್ಯಾಸಂಗ ಮುಗಿಸಿ ವಾಪಸ್ ಬಂದ ಬಳಿಕ, ದತ್ತ ಪತ್ನಿ ಅನಾರೋಗ್ಯಕ್ಕೆ ತುತ್ತಾದ್ರು.
ಎರಡೂವರೆ ವರ್ಷದಿಂದ ಅವರನ್ನು ಉಳಿಸಿಕೊಳ್ಳಲು ದತ್ತ ನಡೆಸಿದ ಇನ್ನಿಲ್ಲದ ಪ್ರಯತ್ನಗಳನ್ನೂ ಹತ್ತಿರದಿಂದ ನೋಡಿದ್ದೇನೆ. ಆದರೆ ಉಳಿಸಿಕೊಳ್ಳಲು ಆಗಲಿಲ್ಲ. ದತ್ತ ಈ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳಬಾರದು. ರಾಜಕೀಯದಲ್ಲೂ ಅವರು ಈಗ ಸೋಲು ಕಂಡು ನೋವಿನಲ್ಲಿ ಇದ್ದಾರೆ. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಭಗವಂತ ನಿರ್ಮಲಾ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಭಾವುಕರಾಗಿ ದೇವರಲ್ಲಿ ಪ್ರಾರ್ಥಿಸಿದರು.

# ಮುಖ್ಯ ಮಂತ್ರಿ ಕುಮಾರಸ್ವಾಮಿ ಸಂತಾಪ
ಮಾಜಿ ಕಡೂರು ಶಾಸಕ ವೈ.ಎಸ್.ವಿ.ದತ್ತ ಅವರ ಪತ್ನಿ ನಿರ್ಮಲಾ‌ರ ನಿಧನಕ್ಕೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಶ್ರೀಮತಿ ನಿರ್ಮಲ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ವೈ.ಎಸ್.ವಿ.ದತ್ತಾ ಅವರ ಕುಟುಂಬಕ್ಕೆ ಭಗವಂತ ನೀ ಡ ಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಚಿವ ಜಿ ಟಿ ದೇವೇಗೌಡ ಸಂತಾಪ :
ವೈ.ಎಸ್.ವಿ. ದತ್ತ ಅವರ ಪತ್ನಿ ನಿರ್ಮಲಾ ನಿಧಾನಕ್ಕೆ ಸಚಿವ ಜಿ ಟಿ ದೇವೇಗೌಡ ಸಂತಾಪ ಸೂಚಿಸಿದ್ದು. ನನ್ನ ಅತ್ಮಿಯ ಸ್ನೇಹಿತ ವೈ.ಎಸ್.ವಿ. ದತ್ತ ಅವರ ಪತ್ನಿ ನಿರ್ಮಲಾ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ನನ್ನ ಮನಸ್ಸಿಗೆ ತುಂಬಾ ನೋವು ಆಗಿದೆ. ದತ್ತ ಅವರು ಶಾಸಕರಾಗಿದ್ದ ಅವಧಿಯಲ್ಲಿ ಅವರ ಪತ್ನಿ ನಿರ್ಮಾಲಾ, ದತ್ತ ಅವರ ಬೆನ್ನಲುಬಾಗಿ ಸಹಕರಿಸಿದ್ದರು ಮತ್ತು ದತ್ತ ಅವರ ರಾಜಕೀಯ ಅಭಿವೃದ್ಧಿಯಲ್ಲಿ, ಇವರ ಪಾತ್ರ ಬಹು ದೊಡ್ಡದಾಗಿತ್ತು. ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ದತ್ತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲಿ ಪ್ರಾರ್ಥಿಸಿದರು.

Facebook Comments

Sri Raghav

Admin