ಗಳಿಸಿದ್ದೆಲ್ಲಾ ಮಳೆಗೆ ಕೊಚ್ಚಿಹೊಯ್ತು, ಮಗಳ ಮದುವೆ ಹೆಂಗ್ ಮಾಡ್ಲಿ..?

ಈ ಸುದ್ದಿಯನ್ನು ಶೇರ್ ಮಾಡಿ

Rain--01

ಮಡಿಕೇರಿ, ಆ.22- ಮದುವೆ ಸಂಭ್ರಮದಲ್ಲಿ ತೊಡಗಬೇಕಿದ್ದ ಮಧುಮಕ್ಕಳು, ಪೋಷಕರು ಪ್ರವಾಹದ ರಣಭೀಕರತೆಗೆ ಮನೆ, ಜಮೀನು ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಆ.26ರಂದು ಮಂಜುಳ ಮತ್ತು ಸೆ.12ರಂದು ರಂಜಿತಾ ಮದುವೆ ನಡೆಸಲು ಹಿರಿಯರು ನಿಶ್ಚಯಿಸಿದ್ದರು. ಮಕ್ಕಂದೂರಿನ ಈ ಇಬ್ಬರು ಯುವತಿಯರ ಮದುವೆ ಕೇರಳದ ಹುಡುಗರೊಂದಿಗೆ ನಿಶ್ಚಯವಾಗಿತ್ತು. ಈಗಾಗಲೇ ಸ್ನೇಹಿತರು, ಸಂಬಂಧಿಕರಿಗೆಲ್ಲ ಆಮಂತ್ರಣ ಪತ್ರಿಕೆಯನ್ನೂ ಹಂಚಲಾಗಿತ್ತು.

ಆದರೆ ವರುಣನ ರಣಕೇಕೆಯಿಂದ ಈ ಯುವತಿಯರ ಮದುವೆ ಕನಸು ನುಚ್ಚು ನೂರಾಗಿದೆ. ಮದುವೆಗಾಗಿ ಖರೀದಿಸಿದ್ದ ವಸ್ತುಗಳು, ಸಾಮಗ್ರಿಗಳೆಲ್ಲ ನೆರೆಯಲ್ಲಿ ಕೊಚ್ಚಿಹೋಗಿ ಮದುವೆ ಅತಂತ್ರವಾಗಿದೆ.

ಎಲ್ಲವನ್ನೂ ಕಳೆದುಕೊಂಡ ಮಧುಮಕ್ಕಳ ಪೋಷಕರು ಪರಿಹಾರ ಕೇಂದ್ರದಲ್ಲಿ ಕುಳಿತು ಮದುವೆ, ಮಕ್ಕಳ ಭವಿಷ್ಯ ನೆನೆದು ಕಣ್ಣೀರಿಡುತ್ತಿದ್ದಾರೆ. ಮದುವೆ ಖುಷಿಯಲ್ಲಿ ನೂರುರು ಕನಸುಗಳನ್ನು ಹೊತ್ತುಕೊಂಡಿದ್ದ ಮಧುಮಕ್ಕಳ ಮುಖದಲ್ಲೀಗ ಬರೀ ಪ್ರಶ್ನಾರ್ಥಕ ಮೂಡಿದೆ.  ಭೀಕರ ಪ್ರವಾಹ, ಭೂ ಕುಸಿತಕ್ಕೆ ಊರಿಗೆ ಊರೇ ಕೊಚ್ಚಿಹೋಗಿದ್ದು, ಜೀವ ಉಳಿಸಿಕೊಂಡರೆ ಸಾಕು ಎಂದು ಸಮರಾತ್ರಿ ಮನೆ ತೊರೆದು ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಕುಟುಂಬಕ್ಕೆ ಮುಂದೇನು ಮಾಡಬೇಕು ಎಂಬ ಬಗ್ಗೆ ದಿಕ್ಕೇ ತೋಚದಂತಾಗಿದೆ.

ಸುಂದರವಾದ ಬದುಕು ಕಟ್ಟಿಕೊಳ್ಳುವ ಅಪಾರವಾದ ಕನಸುಗಳಿದ್ದವು. ಆದರೆ ವಿಧಿಯಾಟವೇ ಬೇರೆಯಾಗಿದೆ. ಕೊಡಗಿನಲ್ಲಿ ಜಲಪ್ರಳಯದಿಂದ ಭೂ ಕುಸಿತವಾಗಿ ನಮ್ಮ ಮನೆ, ಜಮೀನು, ಇನ್ನಿತರೆ ವಸ್ತುಗಳ ಜತೆ ನಮ್ಮ ಬದುಕೂ ತೇಲಿ ಹೋದದಂತಾಗಿದೆ. ಮುಂದೆ ಏನು ಮಾಡಬೇಕು? ಹೇಗೆ ಬದುಕುಕಟ್ಟಿಕೊಳ್ಳಬೇಕು ಎಂಬುದು ತೋಚುತ್ತಿಲ್ಲ ಎಂದು ಯುವತಿಯರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

Facebook Comments

Sri Raghav

Admin