ಪಿಜಿಗಳಲ್ಲಿ ನೆಲೆಸಿರುವವರಿಗೆ ಗಾಂಜಾ ಸರಬರಾಜುಮಾಡಲೆತ್ನಿಸುತ್ತಿದ್ದ ವ್ಯಕ್ತಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

PG--01

ಬೆಂಗಳೂರು,ಆ.22- ದಾರಿಹೋಕರಿಗೆ ಹಾಗೂ ಪಿಜಿಗಳಲ್ಲಿ ನೆಲೆಸಿರುವವರಿಗೆ ಗಾಂಜಾ ಸರಬರಾಜು ಮಾಡಲು ಯತ್ನಿಸುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿ, 8 ಕೆಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲ್ಲೂಕು, ಬಾಗಲೂರು ಸೂಡಾಪುರಂ ದಿನಪಲ್ಲಿ ನಿವಾಸಿ ಶ್ರೀನಿವಾಸ್ ಅಲಿಯಾಸ್ ಸೀನಪ್ಪ(42) ಬಂಧಿತ ಆರೋಪಿ. ನಿನ್ನೆ ಪರಪ್ಪನ ಅಗ್ರಹಾರ ಬಳಿಯ ಗೋವಿಂದಶೆಟ್ಟಿ ಪಾಳ್ಯದ ಅಶ್ವಥ್ ಕಟ್ಟೆ ಬಳಿ ದಾರಿಹೋಕರು ಹಾಗೂ ಪಿಜಿ ನಿವಾಸಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ ಹೊಸೂರು ಪಟ್ಟಣದ ಸಿಪ್‍ಕಾಟ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ನಂತರ ಸುಮಾರು 6 ವರ್ಷ ಜೈಲು ವಾಸ ಅನುಭವಿಸಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಜೀವನ ನಡೆಸಲು ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದ. ಈ ವೇಳೆ ದುಶ್ಚಟಗಳ ದಾಸನಾಗಿ ಸಂಸಾರ ನಿರ್ವಹಣೆ ಮಾಡಲು ಹಣವಿಲ್ಲದೆ ಅಕ್ರಮ ಹಣ ಸಂಪಾದನೆ ಮಾಡುವ ಸಲುವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಆರಂಭಿಸಿದ್ದ ಎಂದು ತಿಳಿದುಬಂದಿದೆ.

ಆಂಧ್ರಪ್ರದೇಶ ಮೂಲದ ಮಹಿಳೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಕ್ತಿಯೊಬ್ಬನಿಂದ ಈತ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸಿದ್ದ ಎಂದು ಹೇಳಲಾಗಿದೆ. ಈತನಿಗೆ ಗಾಂಜಾ ನೀಡಿದ ಅಸಾಮಿಗಳ ಬಗ್ಗೆ ಪತ್ತೆ ಕಾರ್ಯ ನಡೆಯುತ್ತಿದೆ.

Facebook Comments

Sri Raghav

Admin