ಚಿನ್ನ ಖರೀದಿಸುವ ಮುನ್ನ ತಪ್ಪದೆ ಈ ಅಂಶಗಳನ್ನು ಗಮನಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Gold--01

ಚಿನ್ನ,ಬಂಗಾರ,ಕನಕ, ಎಂದೆಲ್ಲಾ ಹೆಸರಿರುವ ಹಳದಿ ಲೋಹದ ಆಭರಣಗಳನ್ನು ಧರಿಸುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.ಮಹಿಳೆಯರೇ ಅಲ್ಲದೆ ಕೆಲವು ಪುರುಷರೂ ಸಹ ಬಂಗಾರದ ಆಭರಣಗಳನ್ನು ಧರಿಸಲು ಅಸಕ್ತಿತೋರುತ್ತಾರೆ. ನಾವು ಇಷ್ಟಪಟ್ಟ ಬಂಗಾರದ ಆಭರಣಗಳನ್ನು ಕೊಳ್ಳುವುದಕ್ಕೂ ಮುಂಚೆ ಜಾಗ್ರತೆವಹಿಸಬೇಕು. ಇಲ್ಲವಾದಲ್ಲಿಎಷ್ಟೇ ದೊಡ್ಡ ಷೋರೂಂಗಳಿಂದ ಖರೀದಿಸಿದರೂ, ಕೆಲವು ವ್ಯಾಪಾರಸ್ಥರು ನಕಲಿ ಆಭರಣಗಳನ್ನು,ಕಡಿಮೆ ಗುಣ ಮಟ್ಟದ ಆಭರಣಗಳನ್ನು ಮಾರಾಟ ಮಾಡುವ ಸಾಧ್ಯತೆಯಿತೆ.ಮೊದಲೇ ಆಭರಣಗಳ ಶುದ್ಧತೆಯ ಕುರಿತು ತಿಳಿದುಕೊಂಡು ವ್ಯವಹರಿಸುವುದೊಳಿತು. ಇಲ್ಲವಾದಲ್ಲಿ,ನಂತರದ ದಿನಗಳಲ್ಲಿ ನಾವು ಮೋಸಹೋಗಿರುವುದಾಗಿ ತಿಳಿದು ಬಂದರೂ ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.ಆದುದರಿಂದ ಕೊಳ್ಳುವುದಕ್ಕೆ ಮೊದಲೇ ಜಾಗ್ರತೆವಹಿಸುವುದೊಳಿತು.

# ಬಿ ಐ ಎಸ್ (BIS) ಮಾರ್ಕ್ :
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಎನ್ನುವುದು ಇಂಡಿಯನ್ ಸ್ಟ್ಯಾಂಡರ್ಡ್ಸ್ ಗೆ ಅನುಗುಣವಾಗಿ ಬಂಗಾರದ ಗುಣಮಟ್ಟದ ಬಗ್ಗೆ ನೀಡುವ ಸರ್ಟಿಫಿಕೆಟ್.ಆದುದರಿಂದ ಆಭರಣಗಳನ್ನು ಕೊಳ್ಳುವಾಗ ಆದರ ಮೇಲೆ ಈ ಗುರುತು ಇದೆಯೇ ಎಂದು ಪರೀಕ್ಷಿಸಬೇಕು. ಚಿತ್ರದಲ್ಲಿ ತೋರಿಸಿರುವ ಹಾಗೆ BIS ಮಾರ್ಕ್ ಇರುತ್ತದೆ.ಇದರಿಂದ ನಾವು ಖರೀದಿಸುವ ಆಭರಣಗಳ ಸಾಚತನ ತಿಳಿಯುತ್ತದೆ.

# ಪ್ಯೂರಿಟಿ ಗ್ರೇಡ್ :
ಬಹಳಷ್ಟು ಮಂದಿ ,ನಾವು ಶುದ್ಧವಾದ ಚಿನ್ನದ ಆಭರಣಗಳನ್ನು ಖರೀದಿಸಿದ್ದೇವೆಂದು ಹೇಳುತ್ತಿರುತ್ತಾರೆ.ನಿಜ ಹೇಳಬೇಕೆಂದರೆ ಶುದ್ಧ ಚಿನ್ನ ಎಂದರೇನೆಂದು ಬಹಳ ಜನಕ್ಕೆ ತಿಳಿದಿಲ್ಲ.24 ಕ್ಯಾರೆಟ್ ಅಥವಾ 999 ಚಿನ್ಹೆ ಇದ್ದಲ್ಲಿ ಅದು ಶುದ್ಧ ಚಿನ್ನವೆಂದು ತಿಳಿಯಬೇಕು.ಇದರ ಬೆಲೆ ಹೆಚ್ಚಾಗಿರುತ್ತದೆ.ಸಾಮಾನ್ಯವಾಗಿ ನಮಗೆ ಇಂತಹ ಚಿನ್ನವನ್ನು ಯಾರೂ ಮಾರುವುದಿಲ್ಲ ಏಕೆಂದರೆ ಶುದ್ಧ ಚಿನ್ನ ಮೃದುವಾಗಿರುತ್ತದೆ. ಇದಕ್ಕೆ ನಿಗದಿತ ಪ್ರಮಾಣದಲ್ಲಿ ತಾಮ್ರ,ಬೆಳ್ಳಿ ಬೆರೆಸಿದರೆ ಮಾತ್ರ ಗಟ್ಟಿತನ ಪಡೆಯತ್ತದೆ. ಇದರಿಂದ ತಯಾರಿಸಿದ ಆಭರಣಗಳು ಮಾತ್ರ ಹೆಚ್ಚು ಕಾಲ ಬಾಳಿಕೆಬರುತ್ತವೆ.23 ಕ್ಯಾರೆಟ್ ಅಥವ 22 ಕ್ಯಾರೆಟ್ ಅಂದರೆ 958 ಅಥವ 916 ಮುದ್ರೆಯುಳ್ಳ ಚಿನ್ನದ ಆಭರಣಗಳನ್ನು ಮಾತ್ರ ನಾವು ಉಪಯೋಗಿಸಬಹುದು. ಆದುದರಿಂದ ಈ ಗುರುತುಗಳುಳ್ಳ ಆಭರಣಗಳನ್ನು ಮಾತ್ರ ನಾವು ಖರೀದಿಸಬೇಕು.ಈ ರೀತಿಯಾಗಿ ಕ್ಯಾರೆಟ್ ಕಡಿಮೆಯಾದಷ್ಟೂ ಶುದ್ಧತೆ ಕಡಿಮೆಯಾಗಿರುತ್ತದೆ.ಅಂದರೆ 22 ಕ್ಯಾರೆಟ್ ಚಿನ್ನಕ್ಕಿಂತ 8 ಕ್ಯಾರೆಟ್ ಚಿನ್ನದ ಶುದ್ಧತೆ ಕಡಿಮೆ. 21,18,17,14,10,9,8 ಕ್ಯಾರೆಟ್ ಆಗಿದ್ದರೆ ಕ್ರಮವಾಗಿ 875,750,708,585,417,375,333 ಮುದ್ರೆಯಿರುತ್ತದೆ. ಈ ಮುದ್ರೆಗಳ ಮೂಲಕ ಚಿನ್ನದ ಶುದ್ಧತೆಯನ್ನು ತಿಳಿದುಕೊಳ್ಳಬಹುದು.

Gold--02

# ಹಾಲ್ ಮಾರ್ಕ್ :
ಚಿನ್ನದ ಶುದ್ಧತೆಯನ್ನು ತಿಳಿಸುವುದಕ್ಕಾಗಿ BIS ಪ್ರಮಾಣಪತ್ರ ಇರುವ ಹಾಗೆ ಹಾಲ್ ಮಾರ್ಕ್ ಸಹ.ಇದಕ್ಕೆ BIS ಆಥರೈಜೇಷನ್ ನೀಡುತ್ತದೆ.ಅಂದರೆ,ಹಾಲ್ ಮಾರ್ಕ್ ಗುರುತು ಇರುವ ಆಭರಣಗಳನ್ನು ಶುದ್ಧವಾದ ಆಭರಣಗಳೆಂದು ಖರೀದಿಸಬಹುದು. ಚಿತ್ರದಲ್ಲಿ ತೋರಿಸಿರುವ ಹಾಗೆ ಹಲವು ರೀತಿಯ ಗುರುತುಗಳಿರುತ್ತವೆ.ಆಭರಣದ ಮೇಲೆ ಇಂತಹ ಯಾವುದೇ ಗುರುತು ಇದ್ದರೂ ಹಾಲ್ ಮಾರ್ಕ್ ಆಭರಣವೆಂದು ಪರಿಗಣಿಸಿ ಆಭರಣಗಳನ್ನು ಖರೀದಿಸಬಹುದು.

# ತಯಾರಿಸಿದ ವರ್ಷ :
ಸಾಮಾನ್ಯವಾಗಿ ನಾವು ಮಾರುಕಟ್ಟೆಯಲ್ಲಿ ಖರೀದಿಸುವ ಇತರೆ ವಸ್ತುಗಳಿಗೆ ಇರುವ ಹಾಗೆ,ಬಂಗಾರದ ಆಭರಣಗಳ ಮೇಲೂ ಅವುಗಳನ್ನು ತಯಾರಿಸಿದ ವರ್ಷವನ್ನು ಮುದ್ರಿಸಿರುತ್ತಾರೆ. ಆಭರಣವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ,ಆಭರಣದ ಮೇಲೆ ಆಂಗ್ಲ ಭಾಷೆಯ A ಗುರುತು ಇದ್ದಲ್ಲಿ ಅದು 2000 ಇಸವಿಯಲ್ಲಿ ತಯಾರಾಗಿರುತ್ತದೆ.ಅದೇ ರೀತಿ Jಇದ್ದಲ್ಲಿ 2008,N ಇದ್ದಲ್ಲಿ 2011, P ಇದ್ದಲ್ಲಿ 2012 ರಲ್ಲಿ ಆ ಆಭರಣವನ್ನು ತಯಾರಿಸಲಾಗಿದೆಯೆಂದು ತಿಳಿಯಬೇಕು. ಈ ಆಂಗ್ಲ ಭಾಷೆಯ ಅಕ್ಷರಗಳನ್ನು BIS ನಿರ್ಧರಿಸುತ್ತದೆ.

# ಮಾರಟಗಾರರ ಗುರುತು :
ಚಿನ್ನದ ಆಭರಣಗಳನ್ನು ಖರೀದಿಸುವಾಗ ಕೊನೆಯದಾಗಿ ಗಮನಿಸಬೇಕಾದ ಅಂಶವೆಂದರೆ,ಆ ಆಭರಣವನ್ನು ಯಾರು ತಯಾರಿಸಿದ್ದಾರೆಯೋ ಅವರ ಮಾರಾಟ ಗುರುತು ಆಭರಣದ ಮೇಲಿರುತ್ತದೆ. ಹೀಗೆ ಐದು ಅಂಶಗಳನ್ನು ಪರಿಶೀಲಿಸುವುದರಿಂದ ನಾವು ಶುದ್ಧ ಚಿನ್ನದ ಆಭರಣಗಳನ್ನು ಖರೀದಿಸಬಹುದು.

# ನಿಖರವಾದ ಬೆಲೆ ಪರಿಶೀಲಿಸಿ
ಚಿನ್ನ ಖರೀದಿಗೂ ಮುಂಚೆ ಚಿನ್ನದ ಪ್ರತಿ ಗ್ರಾಂ ಬೆಲೆ ಯಾವಾಗಲೂ ಪರಿಶೀಲಿಸಿ.ಎಲ್ಲರಿಗೂ ತಿಳಿದಿರುವಂತೆ ಚಿನ್ನದ ಬೆಲೆ ನಗರದಿಂದ ನಗರಕ್ಕೆ ಬದಲಾಗುತ್ತದೆ ಮತ್ತು ಭಾರತದಲ್ಲಿ ಚಿನ್ನದ ಆಭರಣಗಳ ಬೆಲೆಯನ್ನು ವಿವಿಧ ಸಂಘಗಳು ನಿರ್ಧರಿಸುತ್ತವೆ.ಚಿನ್ನದ ಪ್ರತಿ ಗ್ರಾಂ ಬೆಲೆ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವ ಒಂದು ಮಾರ್ಗವೆಂದರೆ ಒಂದಕ್ಕಿಂತ ಹೆಚ್ಚು ಪ್ರಸಿದ್ಧ ಶೋ ರೂಂನಲ್ಲಿ ಪರೀಕ್ಷಿಸುವುದರ ಮೂಲಕ ಅಥವಾ ವಿಶ್ವಾಸಾರ್ಹ ವೆಬ್ಸೈಟ್ಗಳಲ್ಲಿ ಖರೀದಿಗೆ ಬೇಟಿ ಕೊಟ್ಟು ನೀವು ದರಗಳನ್ನು ಪರಿಶೀಲಿಸಬಹುದು.

# ವೇಸ್ಟಜ್ ಮತ್ತು ತಯಾರಿಕೆ ಶುಲ್ಕ ಪರಿಶೀಲಿಸಿ
ನೀವು ಆಯ್ಕೆ ಮಾಡಿದ ಆಭರಣದ ಒಟ್ಟು ಬೆಲೆಯನ್ನು ಪರಿಶಿಲಿಸಿಕೊಳ್ಳಿ, ಪ್ರತಿ 1 ಗ್ರಾಂ’ಗೆ ಎಷ್ಟು ಬೆಲೆ , ವೇಸ್ಟ (wastage)ಎಷ್ಟು ಇದೆ? ಚಿನ್ನದ ತಯಾರಿಕೆ ಶುಲ್ಕಗಳು ? ತೆರಿಗೆ ಎಷ್ಟು ? ಈಗೆ ಸಂಪೂರ್ಣ ಬೆಲೆ ಮಾಹಿತಿಯನ್ನು BIS ಹೊಂದಿರುವ 4 ಅಥವಾ 5 ಅಂಗಡಿಗಳಿಂದ ಪಡೆದುಕೊಳ್ಳಿ – ಇದರಿಂದ ನಿಮಗೂ ಉಪಾಯ ದೊರೆಯುತ್ತದೆ ಹಾಗು ಮೋಸದ ಮಾತುಗಳಿಂದ ಪಾರಾಗಬಹುದು.

# ಕೊಂಡ ಚಿನ್ನದ ರೀಸೇಲಿಂಗ್ ಬೆಲೆ ತಿಳಿದುಕೊಳ್ಳಿ
ಸ್ವಲ್ಪ ದಿನಗಳ ನಂತರ ಅಥವಾ ನಂತರದ ದಿನದಲ್ಲಿ ನೀವು ಕೊಂಡ ಚಿನ್ನದ ಆಭರಣವನ್ನು ಹಿಂದಿರುಗಿಸದರೆ ಅಥವಾ ಚಿನ್ನವನ್ನು ಸಮಕಾಲೀನ ವಿನ್ಯಾಸಕ್ಕಾಗಿ ವಿನಿಮಯ ಮಾಡಲು ಬಯಸಿದರೆ ನೀವು ಚಿನ್ನ ತೆಗೆದುಕೊಳ್ಳುವ ಆಭರಣದ ಅಂಗಡಿಯವರು ನಿಮ್ಮ ಚಿನ್ನಕ್ಕೆ ಎಷ್ಟು ಬೆಲೆ ನೀಡಲು ಸಿದ್ಧವಿದ್ದಾರೆ ಎಂದು ಪರಿಶೀಲಿಸಿ ಹಾಗು ಅದಕ್ಕೆ ಸಂಭಂಧ ಪಟ್ಟ ಅವಧಿ, ಬೆಲೆ ಹೀಗೆ ಸಂಬಂಧ ಪಟ್ಟ ರಸೀಧಿ ಕೇಳಿ ಪಡೆದುಕೊಳ್ಳಿ.

Facebook Comments

Sri Raghav

Admin