ಕೊಡಗಿನಲ್ಲಿ 76 ಶಾಲೆಗಳ ದುರಸ್ತಿಗೆ ಕ್ರಮ : ಸಚಿವ ಎನ್.ಮಹೇಶ್

ಈ ಸುದ್ದಿಯನ್ನು ಶೇರ್ ಮಾಡಿ

N-Mahesh

ಮಡಿಕೇರಿ, ಆ.23- ಕೊಡಗಿನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಹಾಗೂ ಭೂ ಕುಸಿತದಿಂದ 61ಕ್ಕೂ ಹೆಚ್ಚು ಶಾಲೆಗಳಿಗೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು,  76 ಶಾಲೆಗಳು ರಿಪೇರಿಯಾಗಬೇಕಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ತಿಳಿಸಿದ್ದಾರೆ. ಮಡಿಕೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದಾಗಿ ಶಾಲೆಗಳ ದುರಸ್ತಿ ಕಾರ್ಯ ಸವಾಲಿನ ಕೆಲಸವಾಗಿದೆ. ಜಿಲ್ಲೆಯ ಎಲ್ಲಾ ಶಾಲೆಗಳ ದುರಸ್ತಿಗೆ ಒಟ್ಟು 4 ಕೋಟಿ ರೂ. ಅಗತ್ಯವಿದೆ. ಇದಕ್ಕೆ ಸ್ಪಂದಿಸಿರುವ ರಾಜ್ಯದ ಶಿಕ್ಷಕರು ತಮ್ಮ ಒಂದು ದಿನದ ವೇತನವನ್ನು ಸರ್ಕಾರಕ್ಕೆ ನೀಡಲಿದ್ದಾರೆ. ಇದರಿಂದಾಗಿ ಒಟ್ಟು ಸುಮಾರು 100 ಕೋಟಿ ರೂಪಾಯಿಯಷ್ಟು ಹಣ ಕ್ರೋಢಿಕೃತವಾಗುತ್ತದೆ. ಅದರಲ್ಲಿ 4 ಕೋಟಿ ರೂಪಾಯಿಯನ್ನು ಶಿಕ್ಷಣ ಕ್ಷೇತ್ರದ ದುರಸ್ತಿಗಾಗಿ ಬಳಸಿಕೊಂಡು, ಉಳಿದ ಮೊತ್ತವನ್ನು ಕೊಡಗು ಅಭಿವೃದ್ಧಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಪ್ರವಾಹ ಪರಿಸ್ಥಿತಿಯಿಂದಾಗಿ 61 ಕ್ಕೂ ಹೆಚ್ಚಿನ ಶಾಲೆಗಳಿಗೆ ಮಕ್ಕಳು ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. 61 ಶಾಲೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಶಾಲೆಗಳು ಪ್ರಾರಂಭವಾಗಿವೆ ಎಂದು ತಿಳಿಸಿದರು. ದುರಸ್ತಿಯಾಗಬೇಕಾದ ಶಾಲೆಗಳ ವಿದ್ಯಾರ್ಥಿಗಳನ್ನು ಹತ್ತಿರದ ಬೇರೆ ಶಾಲೆಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಮಾತ್ರವಲ್ಲದೆ ಪರಿಹಾರ ಕೇಂದ್ರಗಳಲ್ಲೇ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಂತೆಯೂ ಸೂಚಿಸಿದ್ದೇನೆ. ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ಸಹ ನಡೆಸಲಾಗುತ್ತದೆ. ಇನ್ನು ಎರಡು-ಮೂರು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಣೆಯನ್ನು ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.

ಪ್ರವಾಹದಿಂದಾಗಿ ಸಾವಿರಾರು ನಿರಾಶ್ರಿತರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡಬೇಕು. ಮನೆ ನಿರ್ಮಾಣ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಿರಾಶ್ರಿತರು ಯಾವುದೇ ಸ್ತ್ರೀ-ಶಕ್ತಿ ಸಂಘದ ಸಾಲದ ಬಗ್ಗೆ ಚಿಂತೆ ಮಾಡಬೇಡಿ, ಉದ್ಯೋಗ ಖಾತ್ರಿ ಯೋಜನೆ ಮೂಲಕ ಉದ್ಯೋಗ ಸೃಷ್ಟಿಮಾಡಲು ಯೋಚಿಸಿದ್ದೇವೆ ಎಂದು ಅಭಯ ನೀಡಿದರು. ಈ ಹಿಂದೆ ನಾನು ಸಹ ಕೊಡಗಿನಲ್ಲಿ ಕೆಲಸ ಮಾಡಿದ್ದೇನೆ. ಇಂತಹ ಮಳೆಯನ್ನು ನೋಡಿರಲಿಲ್ಲ ಎಂದರು.

Facebook Comments

Sri Raghav

Admin