ಲೋಕಲ್ ಫೈಟ್ : ನಾಮಪತ್ರ ಹಿಂಪಡೆಯಲು ಇಂದೇ ಕೊನೆ ದಿನ

ಈ ಸುದ್ದಿಯನ್ನು ಶೇರ್ ಮಾಡಿ

Local-Election--01

ಬೆಂಗಳೂರು, ಆ.23-ನಗರ ಸ್ಥಳೀಯ ಸಂಸ್ಥೆಯ ಚುನಾವಣಾ ಕಣ ರಂಗೇರತೊಡಗಿದೆ. ಕೊಡಗು ಹೊರತುಪಡಿಸಿ 104 ನಗರಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ವಿವಿಧ ಪಕ್ಷಗಳಿಂದ 8547 ಒಟ್ಟು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಅಂತಿಮ ಹಂತದ ಬಿರುಸಿನ ಚಟುವಟಿಕೆಗಳು ನಡೆಯುತ್ತಿದೆ.

ಕೊಡಗು, ಕರಾವಳಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತೆ ಕೆಲವೆಡೆ ಅನಾವೃಷ್ಟಿ ನಡುವೆ ನಗರಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಹೆಚ್ಚಿನ ಉತ್ಸಾಹ ಕಂಡುಬರುತ್ತಿಲ್ಲವಾದರೂ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚಟುವಟಿಕೆ ಹೆಚ್ಚಾಗಲಿದೆ.  ಕಾಂಗ್ರೆಸ್, ಜೆಡಿಎಸ್ ನಾಯಕರು ಚುನಾವಣೆ ಬಗ್ಗೆ ಹೆಚ್ಚಾಗಿ ತಲೆ ಕೆಡಸಿಕೊಳ್ಳದೆ ಸ್ಥಳೀಯ ನಾಯಕರಿಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿದ್ದಾರೆ. ಆದರೆ ಬಿಜೆಪಿಯವರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು, ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಹಲವು ಕಸರತ್ತನ್ನು ನಡೆಸುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಪ್ರತ್ಯೇಕವಾಗಿ ಈ ಚುನಾವಣೆಯನ್ನು ಎದುರಿಸುತ್ತಿದೆ. ನಾಯಕರುಗಳು ಫ್ಲೆಂಡ್ಲಿ ಫೈಟ್ ಎಂದು ಹೇಳುತ್ತಿವೆ.

ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಹೊಣೆಗಾರಿಕೆಯನ್ನು ಸ್ಥಳೀಯ ನಾಯಕರಿಗೆ ವಹಿಸಿದ್ದರಾದರೂ ಈ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶತ್ರುಗಳಂತೆ ಬಡಿದಾಡಿಕೊಂಡ ಎರಡೂ ಪಕ್ಷದವರು ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಬಹುತೇಕ ಕಡೆ ಪ್ರತ್ಯೇಕವಾಗಿಯೇ ಕಣಕ್ಕಿಳಿದಿದ್ದಾರೆ. ಬಿಜೆಪಿ ರಣೋತ್ಸವದಲ್ಲಿ ಚುನಾವಣೆ ಎದುರಿಸುತ್ತಿದೆ. ಕೊಡಗು,ಮಲೆನಾಡು ಭಾಗಗಳಲ್ಲಿ ಅತಿವೃಷ್ಟಿ ಹಿನ್ನೆಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿ ಈವರೆಗೆ ಅಷ್ಟೋಂದು ತೀವ್ರವಾದಂತೆ ಕಂಡುಬಂದಿಲ್ಲ. 104 ನಗರ ಸ್ಥಳೀಯ ಸಂಸ್ಥೆಗಳ 2500 ವಾರ್ಡ್‍ಗಳಿಗೆ ಕಾಂಗ್ರೆಸ್‍ನಿಂದ 2253, ಬಿಜೆಪಿಯಿಂದ 2191, ಜೆಡಿಎಸ್‍ನಿಂದ 1286, ಬಿಎಸ್‍ಪಿಯಿಂದ 111, ಇತರೆ ಪಕ್ಷಗಳಿಂದ 170 ಹಾಗೂ ಪಕ್ಷೇತರರು 2539 ಸೇರಿ ಒಟ್ಟು 8547 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಹಿಂಪಡೆದುಕೊಳ್ಳುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಈ ಪ್ರಕ್ರಿಯೆ ಮುಗಿದ ಬಳಿಕ ಕಣದಲ್ಲಿ ಉಳಿದ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಸಿಗಲಿದೆ.
ಪ್ರಚಾರದ ಭರಾಟೆಯೂ ಜೋರಾಗಲಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು, ಶಾಸಕರು, ಸಚಿವರು, ರಾಜಕೀಯ ಪಕ್ಷಗಳ ಮುಖಂಡರು ಕೊಡಗು ಮತ್ತು ಇನ್ನಿತರೆಡೆ ಸಂಭವಿಸಿದ ಮಳೆ ಅನಾಹುತದ ಸಂತ್ರಸ್ತರಿಗೆ ನೆರವು ನೀಡಲು ನಿರತರಾಗಿದ್ದರು. ಈಗ ಮಳೆ ತಗ್ಗಿ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳಿದ ಹಿನ್ನೆಲೆಯಲ್ಲಿ ಮುಖಂಡರು ಚುನಾವಣಾ ಪ್ರಚಾರ ಕಾರ್ಯಕ್ಕೆ ಇಳಿಯಲಿದ್ದಾರೆ.

ಮತದಾರರನ್ನು ಸೆಳೆಯಲು ಈಗಾಗಲೇ ನಾನಾ ಕಸರತ್ತುಗಳನ್ನು ಅಭ್ಯರ್ಥಿಗಳು ಆರಂಭಿಸಿದ್ದಾರೆ. ಗಲ್ಲಿ ಗಲ್ಲಿಗಳಲ್ಲಿ ಸಭೆ ಸಮಾರಂಭಗಳನ್ನು ಮಾಡಲಾಗುತ್ತಿದೆ. ಸ್ತ್ರೀ ಶಕ್ತಿಗಳು ಸಂಘಗಳು ವಿವಿಧ ಸಂಘಟನೆಗಳೊಂದಿಗೆ ಆಕಾಂಕ್ಷಿಗಳೂ ಸಭೆ ನಡೆಸುತ್ತಿದ್ದಾರೆ.  ಬಿ ಫಾರಂ ಪಡೆದ ಅಭ್ಯರ್ಥಿಗಳು ಈಗಾಗಲೇ ಅಧಿಕೃತವಾಗಿ ಪ್ರಚಾರ ಪ್ರಾರಂಭಿಸಿದ್ದಾರೆ. ಕೆಲವೆಡೆ ಸದ್ದಿಲ್ಲದೆ ಪ್ರಚಾರ ನಡೆಯುತ್ತಿದ್ದರೆ ಮತ್ತೆ ಕೆಲವೆಡೆ ಅಬ್ಬರದ ಪ್ರಚಾರ ನಡೆಯುತ್ತಿದೆ. ಒಟ್ಟಾರೆ ಇನ್ನೆರಡು ದಿನಗಳಲ್ಲಿ ಚುನಾವಣಾ ಪ್ರಚಾರಕ್ಕೆ ಮೆರಗು ಬರಲಿದೆ.

Facebook Comments

Sri Raghav

Admin