ಕೊಡಗಿನ ಜನರ ಕಷ್ಟ ಕೇಳಲು ಬರುತ್ತಿದ್ದಾರೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಈ ಸುದ್ದಿಯನ್ನು ಶೇರ್ ಮಾಡಿ

Nirmala-Seetaraman--01

ಬೆಂಗಳೂರು,ಆ.23- ಪ್ರವಾಹಪೀಡಿತ ಮಡಿಕೇರಿಯ ಕೆಲವು ಸ್ಥಳಗಳಿಗೆ ನಾಳೆ ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ಹಾರಂಗಿ ಹೆಲಿಪಾಡ್‍ಗೆ ಆಗಮಿಸಲಿರುವ ನಿರ್ಮಲಾ ಸೀತಾರಾಮನ್, ಮಡಿಕೇರಿಯಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಸ್ಥಳಗಳಿಗೆ ಭೇಟಿ ಕೊಡಲಿದ್ದಾರೆ.

ಮೊದಲು ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಿ ಖುದ್ದು ಸಂತ್ರಸ್ತರಿಂದ ಮನವಿ ಸ್ವೀಕರಿಸಲಿದ್ದಾರೆ. 10.15ಕ್ಕೆ ಮಾಲಾಪುರ ಭೂ ಕುಸಿತ ಪ್ರದೇಶಗಳಿಗೆ ಸಚಿವರು ಭೇಟಿ ನೀಡಲಿದ್ದು, 11.15ಕ್ಕೆ ನಗರದಲ್ಲಿರುವ ಮೈತ್ರಿ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ರಕ್ಷಣಾ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.

ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜೆ.ಬೋಪಯ್ಯ, ಕೊಡಗು ಉಸ್ತುವಾರಿ ಸಿ.ಟಿ.ರವಿ ಸೇರಿದಂತೆ ಮತ್ತಿತರ ಬಿಜೆಪಿ ನಾಯಕರು ರಕ್ಷಣಾ ಸಚಿವರಿಗೆ ಸಾಥ್ ನೀಡಲಿದ್ದಾರೆ. ಭೀಕರ ಪ್ರವಾಹಕ್ಕೆ ಸಿಲುಕಿ 21 ಜನ ಮೃತಪಟ್ಟು, ಅನೇಕ ಮಂದಿ ಗಾಯಗೊಂಡಿದ್ದಾರೆ. ಕೇಂದ್ರವು ಪ್ರವಾಹ ಪೀಡಿತ ಪ್ರದೇಶಗಳಿಗೆ ನೀಡಿರುವ ಹೆಲಿಕಾಪ್ಟರ್, ಸೇನಾಪಡೆಯ ಕಾರ್ಯಾಚರಣೆ ಬಗ್ಗೆಯೂ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.

ಪ್ರವಾಹದಿಂದ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಪ್ರಧಾನಿ ಕಚೇರಿಗೆ ಅದನ್ನು ತಲುಪಿಸಿ ಕರ್ನಾಟಕಕ್ಕೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.  ಈಗಾಗಲೇ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ ಮತ್ತಿತರರು ಪ್ರವಾಹ ಪೀಡಿತ ಮಡಿಕೇರಿಗೆ ಭೇಟಿ ನೀಡಿದ್ದರು. ಕೂಡಲೇ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ.

Facebook Comments

Sri Raghav

Admin