ಕೊಡಗು ಪ್ರವಾಹಕ್ಕೆ ಕಾರಣವೇನು ಗೊತ್ತೇ..? ವಿಜ್ಞಾನಿಗಳು ಹೇಳೋದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Kodagu--Flood--2144

ಬೆಂಗಳೂರು,ಆ.23-ರಸ್ತೆ ಬದಿಯಲ್ಲಿ ಕೇಬಲ್ ಅಳವಡಿಕೆಗೆ ತೆಗೆಯಲಾಗಿದ್ದ ಗುಂಡಿಯನ್ನು ವೈಜ್ಞಾನಿಕವಾಗಿ ಮುಚ್ಚಿ ನಿರ್ವಹಣೆ ಮಾಡದಿರುವುದು, ತಡೆಗೋಡೆ ನಿರ್ಮಿಸದಿರುವುದು ಕೂಡ ಕೊಡಗಿನಲ್ಲಿ ರಸ್ತೆ ಕುಸಿತಕ್ಕೆ ಒಂದು ಪ್ರಮುಖ ಕಾರಣವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ನಿನ್ನೆ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ವಿಜ್ಞಾನಿಗಳ ತಂಡ ಗುಡ್ಡ ಕುಸಿತ, ರಸ್ತೆ ಕುಸಿತಗಳಿಗೆ ಸಂಬಂಧಿಸಿದ ಕಾರಣಗಳನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಿದ್ದಾರೆ.

ಹವಾಮಾನ ತಜ್ಞ ವಿ.ಎಸ್.ಪ್ರಕಾಶ್, ವಿಜ್ಞಾನಿಗಳಾದ ಗೋಪಾಲ್, ಪಾಂಡುರಂಗ ನಾಯಕ್, ಪ್ರೊ.ಜಗದೀಶ್ ಹಾಗೂ ವಂದೇ ಮಾತರಂ ಸಂಸ್ಥೆಯ ಲೋಕೇಶ್ ಅವರು ಕೊಡಗಿನ ಕೆಲವು ಭಾಗಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ತಂಡ ಮಳೆ ಅನಾಹುತದ ಬಗ್ಗೆ ನಡೆಸಿರುವ ವರದಿಯನ್ನು ಸರ್ಕಾರಕ್ಕೂ ಸಲ್ಲಿಸಲಿದೆ. ಕೊಡಗಿನ ಅತಿವೃಷ್ಟಿಗೆ ಸಂಬಂಧಿಸಿದಂತೆ ಈ ಸಂಜೆಯೊಂದಿಗೆ ಮಾತನಾಡಿದ ವಿ.ಎಸ್.ಪ್ರಕಾಶ್,ಜುಲೈನಿಂದ ನಿರಂತರವಾಗಿ ಕೊಡಗು ಹಾಗೂ ಕೇರಳ ಭಾಗದಲ್ಲಿ ಪ್ರತಿದಿನ ಅತಿಯಾದ ಮಳೆಯಾಗಿದೆ. ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಹಲವೆಡೆ ಗುಡ್ಡ, ಮನೆ, ರಸ್ತೆ ಕುಸಿತವಾಗಿದೆ.

Scientis--01

ಮೇಲ್ನೋಟಕ್ಕೆ ಕ್ಷಿಪ್ರವಾಗಿ ನಡೆದಿರುವ ನಗರೀಕರಣ, ರಸ್ತೆ ಅಗಲೀಕರಣ, ಕೇಬಲ್ ಅಳವಡಿಕೆಗಾಗಿ ತೆಗೆದಿರುವ ಚರಂಡಿಯನ್ನು ವೈಜ್ಞಾನಿಕವಾಗಿ ಮುಚ್ಚದಿರುವುದು ಸೇರಿದಂತೆ ಹಲವು ಕಾರಣಗಳು ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ನಿರಂತರವಾಗಿ ಮಳೆಯಾದ ಪರಿಣಾಮ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಕುಸಿತವಾಗುವುದು ನೈಸರ್ಗಿಕ ಪ್ರಕ್ರಿಯೆಯ ಒಂದು ಭಾಗ. ಕೊಡಗು, ಮಲೆನಾಡು ಮಾತ್ರವಲ್ಲದೆ ಹಿಮಾಲಯ ಪರ್ವತ ಪ್ರದೇಶ, ವಿದೇಶಗಳಲ್ಲೂ ಕೂಡ ಗುಡ್ಡ ಸಹಜವಾಗಿ ಇಂತಹ ಕುಸಿತಗಳು ಕಂಡುಬರುತ್ತವೆ. ಕೊಡಗಿನಲ್ಲಿ ರಸ್ತೆಯ ಬದಿಯಲ್ಲಿ ವೈಜ್ಞಾನಿಕವಾಗಿ ಅಳವಡಿಸಿದ ತಡೆಗೋಡೆಗಳು ಇರುವ ಕಡೆಗಳಲ್ಲಿ ಕುಸಿತ ಕಂಡುಬಂದಿಲ್ಲ.ಹಾಗೆ ಬಂಡೆಗಳು ಇರುವ ಕಡೆಯೂ ಕುಸಿತವಾಗಿಲ್ಲ. ಮಣ್ಣು ಹೆಚ್ಚಾಗಿರುವ ಕಡೆಗಳಲ್ಲಿ ಮನೆ, ರಸ್ತೆ ಕುಸಿತವಾಗಿದೆ.

Kodagu--02

ಹಲವು ವರ್ಷಗಳಿಗೊಮ್ಮೆ ಭಾರೀ ಪ್ರಮಾಣದ ಮಳೆಯಾದಾಗ ಭೂ ಭಾಗದಲ್ಲಿ ಒತ್ತಡ, ಅಂತರ್ಜಲವು ಹೆಚ್ಚಾಗುವುದರಿಂದ ಮಣ್ಣಿನಲ್ಲಿ ತೇವಾಂಶ ಗರಿಷ್ಠ ಮಟ್ಟಕ್ಕೆ ತಲುಪಿ ಕುಸಿತಕ್ಕೆ ಕಾರಣವಾಗಬಹುದು ಎಂದರು. ತಾವು ಕೊಡಗಿನಲ್ಲಿ ಪರಿಶೀಲಿಸಿದ ಅಂಶಗಳನ್ನಾಧರಿಸಿ ಕುಸಿತಕ್ಕೆ ಕಾರಣ, ಅದನ್ನು ತಡೆಯುವ ತಂತ್ರಜ್ಞಾನ ಮತ್ತಿತರ ಅಂಶಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

Facebook Comments

Sri Raghav

Admin