ನಾನು ಯಾರ್ ಮಾತು ಕೇಳಲಿ..? ಡಿಸಿ ಶ್ರೀವಿದ್ಯಾ, ಜಿಲ್ಲಾ ಉಸ್ತುವಾರಿ ಮಹೇಶ್’ಗೆ ನಿರ್ಮಲಾ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Nirmala-Seetaraman--01
ಮಡಿಕೇರಿ,ಆ.24-ನಾನು ನಿಮ್ಮ ಮಾತು ಕೇಳಬೇಕೆ(ಜಿಲ್ಲಾ ಉಸ್ತುವಾರಿ ಸಚಿವರು) ಇಲ್ಲವೇ ಜಿಲ್ಲಾಧಿಕಾರಿಗಳ ಮಾತು ಕೇಳಬೇಕೆ? ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಮೊದಲು ಪರಿಹರಿಸಿಕೊಳ್ಳಿ.. ಹೀಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹಾಗೂ ಜಿಲ್ಲಾಧಿಕಾರಿ ಶ್ರೀವಿದ್ಯಾ ವಿರುದ್ಧ ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತರಾಮನ್ ತರಾಟಗೆ ತೆಗೆದುಕೊಂಡ ಘಟನೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.

ಶುಕ್ರವಾರ ನಿರ್ಮಲ ಸೀತರಾಮನ್ ಅವರು ಜಿಲ್ಲೆಯ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ವೇಳೆ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಶಿಷ್ಟಾಚಾರ ಬದಿಗೊತ್ತಿ ಸೋಮವಾರಪೇಟೆಯ ಮಕ್ಕಂದೂರು ಪ್ರದೇಶಕ್ಕೆ ಕರೆದೊಯ್ದರು.  ಈ ಮೊದಲು ಪೂರ್ವ ನಿಗದಿಯಂತೆ ಸೋಮವಾರಪೇಟೆಗೆ ರಕ್ಷಣಾ ಸಚಿವರು ಭೇಟಿ ನೀಡಬೇಕಿತ್ತು. ಇದರಿಂದ ನಿರ್ಮಲಸೀತಾರಾಮನ್ ಅಸಮಾಧಾನಗೊಂಡರು.

ನಗರದ ಜಿಲ್ಲಾಡಳಿತ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುವ ವೇಳೆ ಪ್ರಾರಂಭದಲ್ಲಿ ಯಾರು ಮಾತನಾಡಬೇಕು ಎಂಬುದರ ಬಗ್ಗೆಯೂ ಗೊಂದಲ ನಿರ್ಮಾಣವಾಯಿತು.  ಮೊದಲು ಕೇಂದ್ರ ಸಚಿವರು ಮಾತನಾಡಬೇಕೆ ಇಲ್ಲವೇ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಬೇಕೆ ಎಂಬುದರ ಬಗ್ಗೆ ಭಿನ್ನಾಭಿಪ್ರಾಯ ಉಂಟಾಯಿತು. ಈ ವೇಳೆ ಉಸ್ತುವಾರಿ ಸಚಿವರನ್ನು ತರಾಟೆಗೆ ತೆಗೆದುಕೊಂಡ ನಿರ್ಮಲ ಸೀತಾರಾಮನ್, ಕೇಂದ್ರ ಸಚಿವರಾದ ನಾವು ಇಲ್ಲಿ ಉಸ್ತುವಾರಿ ಸಚಿವರ ಮಾತು ಕೇಳಬೇಕೆ ಎಂದು ಗರಮ್ಮಾದರು. ಮೊದಲು ನಿಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಿ. ನಾನು ಯಾರ ಮಾತಿನಂತೆ ನಡೆದುಕೊಳ್ಳಬೇಕೆಂದು ಪ್ರಶ್ನಿಸಿದರು.

ನಾನು ಶಿಷ್ಟಾಚಾರದಂತೆ ನಡೆದುಕೊಳ್ಳುತ್ತಿದ್ದೇನೆ. ನಿಗದಿಯಾಗಿರುವ ಕಾರ್ಯಕ್ರಮಗಳಂತೆಯೇ ನಡೆಯಬೇಕು. ಕೇಂದ್ರ ಸಚಿವರು ರಾಜ್ಯ ಸಚಿವರ ಮಾತನ್ನು ಕೇಳಬೇಕೆಂದು ಹೇಳುತ್ತಿರುವುದು ಇದೇ ಮೊದಲು ಎಂದು ಸಿಟ್ಟಾದರು. ಮೊದಲು ಸೋಮವಾರಪೇಟೆಗೆ ಹೋಗಬೇಕೆಂದು ನಿಗದಿಯಾಗಿತ್ತು. ಯಾವ ಕಾರಣಕ್ಕಾಗಿ ಕುಶಾಲನಗರದ ಮಕ್ಕಂದೂರು ಪ್ರದೇಶಕ್ಕೆ ನಮ್ಮನ್ನು ಕರೆದುಕೊಂಡು ಹೋಗಿದ್ದೀರಿ. ನಿಮ್ಮ ರಾಜಕೀಯ ಲಾಭನಷ್ಟ ಇಂಥ ಸಂದರ್ಭದಲ್ಲಿ ತೋರಿಸಬೇಡಿ. ಸಂಕಷ್ಟದಲ್ಲಿರುವ ಜನತೆಗೆ ನೆರವು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಪಕ್ಕದಲ್ಲಿದ್ದ ಸಾ.ರಾ.ಮಹೇಶ್ ವಿರುದ್ಧ ಕಿಡಿಕಾರಿದರು.

ಕೇಂದ್ರ ಸಚಿವರ ಜೊತೆ ಶಿಷ್ಟಾಚಾರದ ಪ್ರಕಾರ ನಡೆದುಕೊಳ್ಳಬೇಕೆಂಬುದು ಗೊತ್ತಿದೆಯೋ ಗೊತ್ತಿಲ್ಲವೋ ನನಗೆ ಅರ್ಥವಾಗುತ್ತಿಲ್ಲ. ಮೊದಲು ಸಚಿವರು ಮಾತನಾಡಬೇಕೆಂದು ಹೇಳುತ್ತೀರಿ, ಜಿಲ್ಲಾಧಿಕಾರಿಗಳು ಮಾತನಾಡಲಿ ನೀವು ಹೇಳುತ್ತೀರಿ, ಯಾರ ಮಾತನ್ನು ಕೇಳಿ ಪತ್ರಿಕಾಗೋಷ್ಠಿ ನಡೆಸಬೇಕು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಜಿಲ್ಲಾಧಿಕಾರಿಗೆ ಶ್ರೀವಿದ್ಯಾಗೂ ಎಚ್ಚರಿಸಿದರು.

Facebook Comments

Sri Raghav

Admin