ಕೊಡಗಿನಲ್ಲಿ ಕಣ್ಮರೆಯಾದವರ ಪತ್ತೆಗೆ ಮುಂದುವರೆದ ಡೋಗ್ರಾ ರೆಜಿಮೆಂಟ್ ಪಡೆ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Kodagu--022
ಕೊಡಗು, ಆ.24- ಕೊಡಗಿನಲ್ಲಿ ಸುರಿದ ಮಹಾಮಳೆ ಸಂದರ್ಭದಲ್ಲಿ ಗುಡ್ಡಕುಸಿದು ಕಣ್ಮರೆಯಾದವರ ಪತ್ತೆ ಮಾಡಲು ಡೋಗ್ರಾ ರೆಜಿಮೆಂಟ್ ಪಡೆ ಕಾರ್ಯಾಚರಣೆ ಮುಂದುವರಿಸಿದೆ. ಈವರೆಗೆ ಮೂರು ಮೃತದೇಹಗಳನ್ನು ಪತ್ತೆಮಾಡಿ ಹೊರತೆಗೆದಿದೆ. ಇನ್ನೂ ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಎನ್‍ಡಿಆರ್‍ಎಫ್ ಸೇನಾಪಡೆ, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.

ಮಣ್ಣಿನಡಿ ಸಿಲುಕಿಕೊಂಡಿದ್ದ ಜಾನುವಾರುಗಳನ್ನು ಕೂಡ ರಕ್ಷಿಸಲಾಗುತ್ತಿದೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗುಡ್ಡದ ಮಣ್ಣನ್ನು ಜೆಸಿಬಿ ಇಟಾಚಿಗಳ ಮೂಲಕ ತೆರವುಗೊಳಿಸಲಾಗುತ್ತಿದ್ದು, ಹಲವೆಡೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಸಂಪರ್ಕ ಕಡಿತಗೊಂಡಿದ್ದ ಗ್ರಾಮಗಳಿಗೆ ತಾತ್ಕಾಲಿಕ ಮರದ ಸೇತುವೆಗಳನ್ನು ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಹಸಿರಿನ ಸಿರಿಯಂತಿದ್ದ ಕೊಡಗು ಈಗ ಕೆಸರುಮಯವಾಗಿದೆ.
ನಿರಂತರ ಭಾರೀ ಮಳೆ, ಗುಡ್ಡ ಕುಸಿದು ಕೊಚ್ಚಿಬಂದ ಮಣ್ಣಿನಿಂದ ಕಾಫಿ ತೋಟಗಳು ಕೂಡ ನಾಶವಾಗಿದ್ದು, ಕೊಡಗಿನ ಸೌಂದರ್ಯವನ್ನೇ ಕಸಿದುಕೊಂಡಿದೆ.

ಮಾದಾಪುರ, ಅಂತೋಡು, ಮುಕ್ಕೋಟ್ಲು ಸೇರಿದಂತೆ ಹಾನಿಗೀಡಾದ ಪ್ರದೇಶಗಳಲ್ಲಿ ಇನ್ನೂ ಕೂಡ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಕುಸಿದ ಮನೆಗಳನ್ನು ತೆರವುಗೊಳಿಸಿದ್ದು, ಅಳಿದುಳಿದ ಸಾಮಾನುಗಳನ್ನು ಮನೆಯವರು ತೆಗೆದಿಟ್ಟುಕೊಳ್ಳುತ್ತಿದ್ದಾರೆ. ಮನೆ ನಿರ್ಮಿಸಿ ಬಾಡಿಗೆ ಕೊಟ್ಟು ಬೇರೆ ಕಡೆ ವಾಸವಾಗಿದ್ದವರು ಭಾರೀ ಮಳೆ, ಗುಡ್ಡ ಕುಸಿತದಿಂದ ಮನೆ ಕುಸಿದ ಸುದ್ದಿ ತಿಳಿದು ಈಗ ಕೊಡಗಿಗೆ ಆಗಮಿಸಿ ದಾಖಲೆಗಳನ್ನು ಹಿಡಿದುಕೊಂಡು ಅಧಿಕಾರಿಗಳ ಬಳಿ ಅಂಗಲಾಚುತ್ತಿದ್ದಾರೆ.

ಇನ್ನು ನೆರೆ ಸಂತ್ರಸ್ತರ ಪರಿಹಾರ ಶಿಬಿರಗಳಲ್ಲಿ ಮನೆ ಕಳೆದುಕೊಂಡವರು ವಾಸ್ತವ್ಯವನ್ನು ಮುಂದುವರಿಸಿದ್ದಾರೆ. ಹಲವರು ಪರಿಹಾರ ಕೇಂದ್ರಗಳಿಂದ ತಮ್ಮ ಮನೆಗಳಿಗೆ ತೆರಳಿದ್ದಾರೆ. ಹತ್ತಾರು ಶಾಲೆಗಳು ಮಳೆಯಿಂದ ಹಾನಿಗೀಡಾಗಿರುವುದರಿಂದ ನಿರಾಶ್ರಿತರ ಕೇಂದ್ರಗಳಲ್ಲಿ ಮಕ್ಕಳಿಗೆ ತಾತ್ಕಾಲಿಕವಾಗಿ ಶಿಕ್ಷಣ ನೀಡಲಾಗುತ್ತಿದೆ.   ಮಂಜಿನ ನಗರಿ ಮಡಿಕೇರಿಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ತಗ್ಗಿದ್ದರೂ ಜನರಲ್ಲಿ ಆತಂಕ ಕಡಿಮೆಯಾಗಿಲ್ಲ. ಹಲವು ನಿರಾಶ್ರಿತ ಕೇಂದ್ರಗಳಲ್ಲಿ ನೋವಿನ ನಡುವೆಯೂ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸಿದ್ದು ಕಂಡುಬಂತು.   ಮೈತ್ರಿ ಪರಿಹಾರ ಕೇಂದ್ರದಲ್ಲಿ ಇರುವ ಸಂತ್ರಸ್ತರು ಅಲ್ಲಿಯೇ ವರಮಹಾಲಕ್ಷ್ಮಿ ಹಬ್ಬ ಆಚರಿಸಿ, ಕಳಶವಿಟ್ಟು ಪೂಜಿಸಿ ಅರಿಶಿನ-ಕುಂಕುಮ-ಬಳೆ ಕೊಟ್ಟು ಶುಭಾಶಯ ವಿನಿಮಯ ಮಾಡಿಕೊಂಡರು.

Facebook Comments

Sri Raghav

Admin