ಲೋಕಲ್ ಫೈಟ್ ಪ್ರಚಾರ ಜೋರು, ಮತ ಬೇಟೆ ಶುರು

ಈ ಸುದ್ದಿಯನ್ನು ಶೇರ್ ಮಾಡಿ

BJP-JDS-CONGRESS

ಬೆಂಗಳೂರು, ಆ.24- ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾವೇರತೊಡಗಿದೆ. ಕೊಡಗು ಜಿಲ್ಲೆಹೊರತುಪಡಿಸಿ 104 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ,ಜೆಡಿಎಸ್,ಪಕ್ಷೇತರರು ಸೇರಿದಂತೆ ಎಲ್ಲಾ ಅಭ್ಯರ್ಥಿಗಳು ಪ್ರಚಾರದ ಭರಾಟೆಯನ್ನು ತೀವ್ರಗೊಳಿಸಿದ್ದಾರೆ.
ಮೂರು ಪಕ್ಷಗಳಲ್ಲೂ ಬಂಡಾಯದ ಭೀತಿ ಎದುರಾಗಿದೆ. ಕೊಡಗು, ದಕ್ಷಿಣ ಕನ್ನಡ, ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ನೆರೆಯ ಹಾವಳಿ ಇದ್ದು, ಉತ್ತರ ಕರ್ನಾಟಕದ ಹಲವೆಡೆ ಬರದ ಪರಿಸ್ಥಿತಿ ಇದ್ದು, ಈ ಜಿಲ್ಲೆಗಳಲ್ಲಿ ಚುನಾವಣೆ ಕಾವು ಅಷ್ಟಾಗಿ ಕಾಣುತ್ತಿಲ್ಲ. ಇನ್ನುಳಿದೆಡೆ ಚುನಾವಣೆ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ಆಕಾಂಕ್ಷಿಗಳು ಮನೆಮನೆಗೆ ತೆರಳಿ ಮತಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್, ಜೆಡಿಎಸ್
ಪಕ್ಷಗಳು ಈ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದೆ ಪ್ರತ್ಯೇಕವಾಗಿ ಕಣಕ್ಕಿಳಿದಿವೆ. ಬಹಿರಂಗ ಹೊಂದಾಣಿಕೆ ಇಲ್ಲ. ಆದರೆ, ಹಲವೆಡೆ ಒಳ ಒಪ್ಪಂದ ಏರ್ಪಟ್ಟಿದೆ.

ಹಳೆ ಮೈಸೂರು ಭಾಗ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಹಾಸನ ಮುಂತಾದ ಜೆಡಿಎಸ್ ಪ್ರಭಾವವಿರುವ ಕಡೆ ಕಾಂಗ್ರೆಸ್ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪ್ರಭಾವವಿರುವ ಇನ್ನುಳಿದ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಈ ರೀತಿ ಪರೋಕ್ಷ ಹೊಂದಾಣಿಕೆ ಮಾಡಿಕೊಂಡು ಎರಡೂ ಪಕ್ಷಗಳು ಚುನಾವಣೆ ನಡೆಸುತ್ತಿವೆ. ಒಟ್ಟಾರೆ ಬಿಜೆಪಿಯನ್ನು ಮಣಿಸಬೇಕೆಂದು ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಫ್ರೆಂಡ್ಲಿ ಫೈಟ್ ನಡೆಸುತ್ತಿವೆ.

ಬಿಜೆಪಿ ಪಕ್ಷ ಚುನಾವಣೆ ಹೊಣೆಯನ್ನು ಪಕ್ಷದ ಉಸ್ತುವಾರಿಗಳಿಗೆ ವಹಿಸಿದೆ. ಕಾಂಗ್ರೆಸ್ ಪಕ್ಷ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನು ನೀಡಿದೆ. ಜೆಡಿಎಸ್ ಪಕ್ಷ ಸಚಿವರು, ಪಕ್ಷದ ಜಿಲ್ಲಾ ಘಟಕಗಳ ಮುಖ್ಯಸ್ಥರುಗಳಿಗೆ ಚುನಾವಣಾ ಸಾರಥ್ಯ ವಹಿಸಿದ್ದಾರೆ. ಹೊಂದಾಣಿಕೆಯಾಗದ ಕೆಲವೆಡೆ ಮೈತ್ರಿ ಹೊಣೆಯನ್ನು ಸ್ಥಳೀಯ ನಾಯಕರುಗಳಿಗೆ ಬಿಡಲಾಗಿದೆ. ಮತ್ತೆ ಕೆಲವೆಡೆ ಈ ಎರಡು ಪಕ್ಷಗಳ ನಡುವೆಯೇ ಜಿದ್ದಾಜಿದ್ದಿ ಏರ್ಪಟ್ಟಿದೆ.  ಮುಂಬರುವ ಲೋಕಸಭೆ ಚುನಾವಣೆಗೆ ಮೂರೂ ಪಕ್ಷಗಳಿಗೆ ಈ ಚುನಾವಣಾ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದೇ ಹೇಳಲಾಗಿದೆ. ಹಾಗಾಗಿ ಮೂರೂ ಪಕ್ಷಗಳು ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ತಮ್ಮದೇ ಆದ ತಂತ್ರ ಅನುಸರಿಸುತ್ತಿವೆ. ಅಭ್ಯರ್ಥಿಗಳು ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.

ಬಿಜೆಪಿ ಪಕ್ಷ ಶಾಸಕರು, ಮಾಜಿ ಶಾಸಕರು, ಮುಖಂಡರಿಗೆ ಆಯಾ ಜಿಲ್ಲೆಗಳ ಉಸ್ತುವಾರಿ ನೀಡಿದೆ. ಉಸ್ತುವಾರಿಗಳು ಈಗಾಗಲೇ ಒಂದು ಸುತ್ತಿನ ಪ್ರವಾಸ ನಡೆಸಿದ್ದಾರೆ. ವಾರ್ಡ್‍ಗಳ ಅಭ್ಯರ್ಥಿಗಳನ್ನು ಜಿಲ್ಲಾ ಘಟಕಗಳ ಮೂಲಕವೇ ಆಯ್ಕೆ ಮಾಡಿದ್ದು, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ ಅತೃಪ್ತಿಯನ್ನು ಆಯ್ಕೆ ಮಟ್ಟದಲ್ಲಿಯೇ ತಣ್ಣಗಾಗಿಸುವ ಪ್ರಯತ್ನವನ್ನು ಈ ಮೂಲಕ ಮಾಡಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಸಾಧನೆಗಳು, ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ತಿಳಿಸುವ ಮೂಲಕ ಬಿಜೆಪಿ ಮತ ಪ್ರಚಾರದಲ್ಲಿ ತೊಡಗಿದೆ. ಅದೇ ರೀತಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಅಭ್ಯರ್ಥಿಗಳದ್ದೇ ತಲೆಬಿಸಿ ಹೆಚ್ಚಾಗಿದೆ. ಬಂಡಾಯ ಶಮನ ಮಾಡುವ ಪ್ರಯತ್ನ ಕೂಡ ನಡೆಯುತ್ತಿದೆ.  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮುಂತಾದ ನಾಯಕರು ಪ್ರಚಾರಕ್ಕೆ ತೆರಳಲಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು, ಹಲವು ಜೆಡಿಎಸ್ ಮುಖಂಡರು ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‍ನ ಬಹುತೇಕ ಸಚಿವರು ಕೊಡಗು ನೆರೆ ಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ತೊಡಗಿರುವುದರಿಂದ ಪಕ್ಷದ ಮುಖಂಡರು ಅಷ್ಟು ಬಿರುಸಿನ ಪ್ರಚಾರ ನಡೆಸುತ್ತಿಲ್ಲ. ಆದರೆ, ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಒಟ್ಟಾರೆ 29 ನಗರಸಭೆಯ 927 ವಾರ್ಡ್, 53 ಪುರಸಭೆಯ 1247 ವಾರ್ಡ್, 23 ಪಟ್ಟಣ ಪಂಚಾಯಿತಿಯ 400 ವಾರ್ಡ್‍ಗಳು ಸೇರಿ 2574 ವಾರ್ಡ್‍ಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಯಾವ ಪಕ್ಷದವರು ಹೆಚ್ಚು ಸ್ಥಾನ ಗಳಿಸಲಿದ್ದಾರೆ, ಯಾವ ಪುರಸಭೆ, ಪಟ್ಟಣ ಪಂಚಾಯಿತಿ, ನಗರ ಪಾಲಿಕೆ ಯಾವ ಪಕ್ಷದ ಪಾಲಾಗಲಿದೆ, ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

Facebook Comments