ಬಿಬಿಎಂಪಿಯಲ್ಲಿ ಸಂಚಲನ ಸೃಷ್ಟಿಸಿದ ಸಿಎಸ್ ನಿರ್ಧಾರ, ಆಡಳಿತ-ಪ್ರತಿಪಕ್ಷಗಳ ನಡುವೆ ವಾಕ್ಸಮರ

ಈ ಸುದ್ದಿಯನ್ನು ಶೇರ್ ಮಾಡಿ

shiva-padmanabhareddy

ಬೆಂಗಳೂರು, ಆ.24- ಪಾಲಿಕೆಯ ಎಂಟು ವಲಯಗಳಿಗೆ ಒಬ್ಬೊಬ್ಬ ಹಿರಿಯ ಐಎಎಸ್ ಅಧಿಕಾರಿಗಳನ್ನು ಉಸ್ತುವಾರಿಗಳನ್ನಾಗಿ ನೇಮಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್ ಅವರ ನಿರ್ಧಾರ ಬಿಬಿಎಂಪಿಯಲ್ಲಿ ಸಂಚಲನ ಸೃಷ್ಟಿಸಿದೆ.  ಬಿಡಿಎ, ಬಿಬಿಎಂಪಿ, ಬಿಡಬ್ಲ್ಯೂಎಸ್‍ಎಸ್‍ಬಿ, ಬೆಸ್ಕಾಂ, ಪಿಡಬ್ಲ್ಯೂಡಿ, ಸಂಚಾರಿ ಪೆÇಲೀಸರು, ಟೆಲಿಕಾಂ, ಎನ್‍ಎಚ್‍ಎಐ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವ ಉದ್ದೇಶದಿಂದ ಮುಖ್ಯ ಕಾರ್ಯದರ್ಶಿಗಳು ಹಿರಿಯ ಐಎಎಸ್ ಅಧಿಕಾರಿಗಳನ್ನು ಎಂಟು ವಲಯಗಳ ಉಸ್ತುವಾರಿಗಳನ್ನಾಗಿ ನೇಮಿಸಿರುವುದು ಪಾಲಿಕೆ ಮೇಲೆ ಹಿಡಿತ ಸಾಧಿಸಲು ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಗರದಲ್ಲಿ ಇದುವರೆಗೂ ಯಾವುದೇ ಅನಾಹುತ ಸಂಭವಿಸಿದರೆ ಅದರ ಹೊಣೆ ಹೊರಲು ಯಾವ ಸಂಸ್ಥೆಗಳೂ ಮುಂದೆ ಬರುತ್ತಿರಲಿಲ್ಲ. ಹೀಗಾಗಿ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಳ್ಳುತ್ತ ಸಮಸ್ಯೆ ಬಗೆಹರಿಸುವ ಬದಲು ಕಾಲಹರಣ ಮಾಡುತ್ತಿದ್ದರು.  ಅಧಿಕಾರಿಗಳ ಈ ನಿರ್ಧಾರ ಸಾರ್ವಜನಿಕ ವಲಯದ ವ್ಯಾಪಕ ಟೀಕೆಗೆ ಒಳಗಾಗಿತ್ತು. ಹೀಗಾಗಿ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಪಾಲಿಕೆಯ ಒಳ-ಹೊರಗನ್ನು ಅರಿತಿದ್ದ ಮುಖ್ಯ ಕಾರ್ಯದರ್ಶಿ ವಿಜಯ್‍ಭಾಸ್ಕರ್ ಅವರು ಪಾಲಿಕೆ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಎಂಟು ವಲಯಗಳಿಗೆ ಒಬ್ಬೊಬ್ಬ ಐಎಎಸ್ ಅಧಿಕಾರಿಗಳನ್ನು ಉಸ್ತುವಾರಿ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೆ.

ಈ ಅಧಿಕಾರಿಗಳು ಆಯಾ ವಲಯಗಳ ಜಂಟಿ ಆಯುಕ್ತ ರಿಗಿಂತ ಹೆಚ್ಚಿನ ಅಧಿಕಾರ ಉಳ್ಳವರಾಗಿದ್ದು, ಪ್ರತಿ ತಿಂಗಳು ವಿವಿಧ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸುವುದು, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಹಾಗೂ ಆಯಾ ವಲಯಗಳಲ್ಲಿ ತಾವು ತೆಗೆದುಕೊಂಡ ನಿರ್ಧಾರವನ್ನು ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ. ಎಂಟು ವಲಯಗಳ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಲು ಬಿಬಿಎಂಪಿ ಆಯುಕ್ತರಿಗೆ ಕಾಲಾವಕಾಶದ ಕೊರತೆ ಇರುವುದನ್ನು ಮನಗಂಡು ಮುಖ್ಯ ಕಾರ್ಯದರ್ಶಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದರೂ ಆಯುಕ್ತರ ಮೇಲೆ ಹಿಡಿತ ಸಾಧಿಸುವುದು ಈ ನೇಮಕಾತಿಯ ಹಿಂದಿನ ಹುನ್ನಾರ ಎಂದೇ ಭಾವಿಸಲಾಗುತ್ತಿದೆ. ಮುಖ್ಯ ಕಾರ್ಯದರ್ಶಿಗಳ ಈ ನಿರ್ಧಾರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ.

ಪಾಲಿಕೆಯಲ್ಲಿ ಅಧಿಕಾರ ನಡೆಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಆಡಳಿತದ ವೈಫಲ್ಯವೇ ಮುಖ್ಯ ಕಾರ್ಯದರ್ಶಿಗಳ ಈ ನಿರ್ಧಾರಕ್ಕೆ ಕಾರಣ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ್ದಾರೆ. ನಗರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಡಳಿತ ವಿಫಲವಾಗಿದೆ. ಹೀಗಾಗಿ ಮುಖ್ಯ ಕಾರ್ಯದರ್ಶಿಗಳು ಉಸ್ತುವಾರಿ ಅಧಿಕಾರಿಗಳನ್ನು ನೇಮಿಸುವ ಮೂಲಕ ಆಡಳಿತ ವೈಫಲ್ಯದ ಕೊರತೆಯನ್ನು ಮರೆಮಾಚಲು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ರೆಡ್ಡಿ ದೂರಿದರು. ಆದರೆ, ಪ್ರತಿಪಕ್ಷದ ನಾಯಕರ ಆರೋಪವನ್ನು ನಿರಾಕರಿಸಿರುವ ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ನಮ್ಮ ಜನಪರ ಕಾರ್ಯಕ್ರಮಗಳನ್ನು ಸಹಿಸಿಕೊಳ್ಳಲು ಆಗದೆ ವಿರೋಧ ಪಕ್ಷದವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.  ಪಾಲಿಕೆ ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸಬೇಕು, ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಜತೆಗೆ ಮತ್ತಷ್ಟು ಜನಪರ ಕಾರ್ಯ ಕೈಗೊಳ್ಳುತ್ತೇವೆ ಎಂದು ಶಿವರಾಜ್ ಹೇಳಿದರು.

Facebook Comments

Sri Raghav

Admin