ಅಂಗಾಂಗ ದಾನ ಮಾಡಿ ಮೂವರಿಗೆ ಜೀವ ಕೊಟ್ಟು ಹೋದ 7 ವರ್ಷದ ಬಾಲಕ..!

ಈ ಸುದ್ದಿಯನ್ನು ಶೇರ್ ಮಾಡಿ

Shankara-abhadigere

ಬೆಂಗಳೂರು, ಆ.25 – ದುಃಖದ ಮಡುವಿನಲ್ಲೂ ಮಗನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮೂವರು ರೋಗಿಗಳಿಗೆ ಜೀವದಾನ ಮಾಡಿ ಸಾರ್ಥಕತೆ ಮೆರೆಯಲಾಗಿದೆ. ಹೈ ಗ್ರೇಡ್ ಪೊಂಟೈನ್ ಗ್ಲೈಯೋಮಾಸ್ ಎಂಬ ರೋಗದಿಂದ ಬಳಲುತ್ತಿದ್ದ 7 ವರ್ಷದ ಬಾಲಕ ಶಂಕರ ಬಡಿಗೇರ್‍ನ ಅಂಗಾಂಗಳನ್ನು ದಾನ ಮಾಡಿದ್ದರಿಂದ ಇತರೆ ಮೂವರಿಗೆ ಜೀವದಾನ ಸಿಕ್ಕಿದೆ.

ಈ ಕಾಯಿಲೆಯಿಂದಾಗಿ ಪೊಂಟೈನ್ ಗ್ಲೈಯೋಮಾಸ್ ಗೆಡ್ಡೆಗಳು(ಕ್ಯಾನ್ಸರ್ ಗಡ್ಡೆಗಳು) ಮಿದುಳಿನ ವಿವಿಧ ಭಾಗಗಳಿಗೆ ಆವರಿಸಿದ್ದವು. ಬಾಲಕನಿಗೆ ಬಂದಿದ್ದ ಕ್ಯಾನ್ಸರ್‍ನ ಗಂಭೀರ ಸ್ವರೂಪ ಪಡೆದಿತ್ತು. ಇದರ ಪರಿಣಾಮ ಮಿದುಳಿನ ಎಲ್ಲಾ ಚಟುವಟಿಕೆಗಳು ನಿಷ್ಕ್ರಿಯಗೊಂಡಿದ್ದರಿಂದ 2018 ರ ಜುಲೈ 19 ರಂದು ಬ್ರೈನ್ ಡೆಡ್ ಎಂದು ಘೋಷಿಸಲಾಯಿತು. ಇದಾದ ಬಳಿಕ ಶಂಕರ್ ಪೋಷಕರಾದ ಶಿವಕುಮಾರ್ ಮತ್ತು ಸುನೀತಾ ಬಡಿಗೇರ್ ಅವರಿಗೆ ತಮ್ಮ ಮಗನ ಅಂಗಾಂಗಗಳನ್ನು ದಾನ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕಷ್ಟಕರವಾಗಿತ್ತು. ಇದಕ್ಕಾಗಿ ಅವರು ಮತ್ತೊಬ್ಬರ ನೆರವು ಸಲಹೆ ಕೋರಿದರು. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನ ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ಶಂಕರನ ಕುಟುಂಬದ ಸಮ್ಮತಿ ಪಡೆದು ಮಗುವನ್ನು ದಾಖಲಿಸಿಕೊಂಡು ಅಂಗಾಂಗಗಳ ದಾನಕ್ಕೆ ವ್ಯವಸ್ಥೆ ಮಾಡಲಾಯಿತು.

ಹೃದಯವನ್ನು 13 ವರ್ಷದ ಬಾಲಕಿಗೆ, ಎರಡು ಮೂತ್ರಪಿಂಡಗಳ ಪೈಕಿ ಒಂದನ್ನು 44 ವರ್ಷ ಮತ್ತು ಮತ್ತೊಂದನ್ನು 42 ವರ್ಷದ ಪುರುಷರಿಗೆ ಕಸಿ ಮಾಡಿ ಮೂವರ ಜೀವ ಉಳಿಸಲಾಗಿದೆ.  ಮಗುವಿಗೆ ಹೃದಯ ಕಸಿ ಮಾಡಿದ ಮೊದಲ ಪ್ರಕರಣ ಇದಾಗಿದ್ದು, ಹೃದಯಾಘಾತಕ್ಕೆ ಒಳಗಾಗಿದ್ದ ಈ ಹೆಣ್ಣು ಮಗು ಹೃದಯಕ್ಕಾಗಿ ಕಳೆದ ಆರು ತಿಂಗಳಿಂದ ಕಾಯುತ್ತಿತ್ತು. ಈ ಹೃದಯ ಕಸಿ ಶಸ್ತ್ರಚಿಕಿತ್ಸೆ ನಂತರ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.
44 ವರ್ಷದ ವ್ಯಕ್ತಿ ಕಳೆದ ನಾಲ್ಕು ವರ್ಷಗಳಿಂದ ಮೂತ್ರಪಿಂಡ ರೋಗದಿಂದ ಬಳಲುತ್ತಿದ್ದರೆ, 42 ವರ್ಷದ ವ್ಯಕ್ತಿ ಕಳೆದ 7 ವರ್ಷಗಳಿಂದ ಬಳಲುತ್ತಿದ್ದರು. ಇದೀಗ ಅವರ ಬಾಳಲ್ಲಿ ಹೊಸ ಬೆಳಕು ಮೂಡಿದೆ.

ಡಾ.ಅನಿಲ್‍ಕುಮಾರ್ ಬಿ.ಟಿ, ಡಾ.ನರೇಂದ್ರ ಎಸ್, ಡಾ.ಮನೋಹರ್ ಮತ್ತು ಡಾ.ರಾಜೀವ್ ಇ.ಎನ್. ಅವನ್ನೊಳಗೊಂಡ ತಜ್ಞ ವೈದ್ಯರ ತಂಡ ಈ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆಗಳನ್ನು ನೆರವೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.  ತಮ್ಮ ಮಗನ ಅಂಗಾಂಗಳ ದಾನದ ಬಗ್ಗೆ ಮಾತನಾಡಿದ ಶಂಕರನ ತಾಯಿ ಸುನೀತಾ, ಮಗನನ್ನು ಕಳೆದುಕೊಂಡು ಭಾರೀ ದುಃಖದಲ್ಲಿದ್ದೆವು. ನನ್ನ ಮಗನನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ನಡೆಸಿದೆವು. ಆದರೆ, ಆಗಲಿಲ್ಲ. ಮಗುವಿನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಗುವಿಗೆ ನ್ಯಾಯ ಒದಗಿಸಿದ್ದೇವೆ ಎಂಬ ಧನ್ಯತಾಭಾವ ಮೂಡಿದೆ ಎಂದು ಕಣ್ಣೀರು ಹಾಕಿದ್ದಾರೆ.

Facebook Comments

Sri Raghav

Admin