ಸಿದ್ದರಾಮಯ್ಯನವರಿಗೆ ಅಧಿಕಾರದ ಆಸೆಯಿಲ್ಲ, ಅವರೇಕೆ ಹಾಗೆ ಹೇಳಿದರೋ ಗೊತ್ತಿಲ್ಲ : ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

Dinesh-Gundurao

ಮಂಗಳೂರು, ಆ.25- ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂಬ ಹೇಳಿಕೆಯನ್ನು ಯಾವ ಕಾರಣಕ್ಕೆ ನೀಡಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಅಧಿಕಾರದ ಆಸೆ ಇಲ್ಲ. ಮುಂದಿನ ರಾಜಕೀಯ ದಾರಿ ಹೇಗಿರುತ್ತದೆಯೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾರ್ಮಿಕವಾಗಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಚುನಾವಣೆಯಲ್ಲಿ ನಾವು ನಂಬರ್ ಒನ್ ಆಗುತ್ತೇವೆ ಎಂದು ಹೇಳಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಲಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಉಂಟಾಗಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವೇ ಮೊದಲ ಸ್ಥಾನ ಪಡೆಯುತ್ತೇವೆ ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಆಡಳಿತ ನಡೆಸುತ್ತದೆ. ಮೈತ್ರಿ ಸಂದರ್ಭದಲ್ಲಿ ಮಾಡಿಕೊಂಡಿರುವ ಒಪ್ಪಂದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಪ್ರಧಾನಿ ವಿರುದ್ದ ವಾಗ್ದಾಳಿ :
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಮೋದಿ ಭ್ರಷ್ಟಾಚಾರಿಗಳಿಗೆ ಆಶ್ರಯ ನೀಡಿದ್ದಾರೆ. ಹಿಂದುತ್ವ ಮತ್ತು ಭಾವನಾತ್ಮಕ ವಿಚಾರಗಳಿಗೆ ಕೈ ಹಾಕಿದ್ದಾರೆ. ಯುವಕರಿಗೆ ಪ್ರಧಾನಿ ಮೋದಿ ಉದ್ಯೋಗ ನೀಡಲಿಲ್ಲ. ವಿದೇಶದಿಂದ ಕಪ್ಪುಹಣವನ್ನು ತಂದು ದೇಶದ ಜನರಿಗೆ ಕೊಟ್ಟಿಲ್ಲ ಎಂದು ಟೀಕಿಸಿದರು. ರಾಜ್ಯದ ಬಿಜೆಪಿ ಸಂಸದರು ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯಕ್ಕೆ ಅವರು ಯಾವುದೇ ಕೊಡುಗೆ ನೀಡಿಲ್ಲ. ಬಿಜೆಪಿಯ ನೈಜ ಮುಖವನ್ನು ನಾವು ಅನಾವರಣಗೊಳಿಸುತ್ತೇವೆ ಎಂದು ಹೇಳಿದರು.

ಮುಖಂಡರೊಂದಿಗೆ ಚರ್ಚಿಸಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುವುದು. ಕಾಂಗ್ರೆಸ್ ಪಕ್ಷ ಈಗಲೂ ಗಟ್ಟಿ ನೆಲೆ ಹೊಂದಿದೆ. ಶವ ರಾಜಕೀಯದಿಂದ ಬಿಜೆಪಿ ಇದೀಗ ಕೊಳಕು ರಾಜಕೀಯಕ್ಕೆ ಇಳಿದಿದೆ. ಇವುಗಳೆನ್ನೆಲ್ಲಾ ಜನರು ನೋಡುತ್ತಿದ್ದಾರೆ. ಚುನಾವಣೆಯಲ್ಲಿ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.  ಪ್ರಧಾನಿ ಮೋದಿ ಪೇಪರ್ ಟೈಗರ್. ಅತ್ಯಾಚಾರಿಗಳ ಪರ ಬಿಜೆಪಿಗರು ಮೆರವಣಿಗೆ ಮಾಡುತ್ತಾರೆ. ಈ ಬಗ್ಗೆ ಪ್ರಧಾನಿ ಒಂದು ಮಾತನ್ನೂ ಹೇಳುವುದಿಲ್ಲ. ದೇಶದಲ್ಲಿ ಅತಂತ್ರ ಸ್ಥಿತಿಯನ್ನು ಬಿಜೆಪಿಯವರು ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.

Facebook Comments

Sri Raghav

Admin