ಮಿತಿಮೀರಿದ ಸರ್ಪಗಳ ಕಾಟ, ಕೇರಳದಲ್ಲೀಗ ‘ಸ್ನೇಕ್ ಅಲರ್ಟ್’

ಈ ಸುದ್ದಿಯನ್ನು ಶೇರ್ ಮಾಡಿ

Snake-alert
ತಿರುವನಂತಪುರಂ (ಪಿಟಿಐ), ಆ.25-ಭಾರೀ ಮಳೆ ಹಾಗೂ ಜಲಪ್ರಳಯದಿಂದ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿರುವ ಕೇರಳದಲ್ಲಿ ಈಗ ಸರ್ಪಗಳ ಕಾಟ ಹೆಚ್ಚಾಗಿದೆ. ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಹಾವುಗಳು ಹಾಗೂ ಇತರ ಸರಿಸೃಪಗಳು ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುತ್ತಾ, ನೆರೆ ಸಂತ್ರಸ್ತರನ್ನು ಆತಂಕಕ್ಕೀಡು ಮಾಡುತ್ತಿವೆ.

ಇದೇ ವೇಳೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ತಮ್ಮ ಮನೆಗಳಿಗೆ ಹಿಂದಿರುಗಿದ ಹಲವರಿಗೆ ವಿಷಜಂತುಗಳು ಕಚ್ಚುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಕೇರಳದ 14 ಜಿಲ್ಲೆಗಳಲ್ಲಿ ಸ್ನೇಕ್ ಅಲರ್ಟ್(ಸರ್ಪ ಕಟ್ಟೆಚ್ಚರ) ಘೋಷಿಸಲಾಗಿದೆ.
ಸರ್ಕಾರಿ ಆಸ್ಪತ್ರೆಗಳೂ ಸೇರಿದಂತೆ ಖಾಸಗಿ ನರ್ಸಿಂಗ್‍ಹೋಮ್‍ಗಳು ಆಂಟಿ-ವೆನೊಮ್(ನಂಜು ನಾಶಕ) ಔಷಧಿಗಳೊಂದಿಗೆ ಸಜ್ಜಾಗಿವೆ.

ನೀರಿನ ಮಟ್ಟ ಕಡಿಮೆಯಾಗಿರುತ್ತಿರುವ ಹಿನ್ನೆಲೆಯಲ್ಲಿ ಹಾವುಗಳು ಹಾಗೂ ಇತರ ಜಂತುಗಳ ಉಪಟಳ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಕಪ್‍ಬೋರ್ಡ್‍ಗಳು, ಅಥವಾ ಕಾರ್ಪೆಟ್‍ಗಳ ಕೆಳಗೆ, ಬಟ್ಟೆಗಳು ಅಥವಾ ವಾಷಿಂಗ್ ಮಷಿನ್ ಒಳಗೆ ಹಾಗೂ ಮನೆಯ ಇತರ ಸಂದುಗಳಲ್ಲಿ ಹಾವುಗಳು ಆಶ್ರಯ ಪಡೆದಿರುವ ಸಾಧ್ಯತೆ ಇದ್ದು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಮಳೆ ಮತ್ತು ಪ್ರವಾಹದಿಂದ ಹಾವುಗಳ ವಾಸಸ್ಥಳವು ಜಲಾವೃತವಾಗಿದ್ದು, ಅವುಗಳು ಹೆದರಿ ಎಲ್ಲೆಂದರಲ್ಲಿ ನುಗ್ಗಿವೆ. ಈಗ ನೀರು ಕಡಿಮೆಯಾಗಿರುವುದರಿಂದ ತಮ್ಮ ಆವಾಸಕ್ಕೆ ಮತ್ತೆ ತೆರಳುತ್ತಿರುವುದರಿಂದ ಅವುಗಳು ಎಲ್ಲೆಂದರಲ್ಲಿ ಕಂಡುಬರುತ್ತಿವೆ ಎಂದು ಉರುಗ ತಜ್ಞರೊಬ್ಬರು ಹೇಳಿದ್ದಾರೆ.

ಪರಿಹಾರ ಮತ್ತು ಪುನರ್ವಸತಿ ಶಿಬಿರಗಳಲ್ಲಿ ಆಶ್ರಯ ಪಡೆದು ತಮ್ಮ ಮನೆಗಳಿಗೆ ಹಿಂದಿರುಗಿದ ನೆರೆ ಸಂತ್ರಸ್ತರಿಗೆ ಕೆಲವು ಪ್ರದೇಶಗಳಲ್ಲಿ ಮೊಸಳೆಗಳು, ಹಾವುಗಳು ಹಾಗೂ ಇತರ ಸರಿಸೃಪಗಳು ಸ್ವಾಗತ ಕೋರಿದ್ದವು. ಇದರಿಂದ ಭಯಭೀತರಾದ ಜನರು ಸ್ಥಳೀಯರ ನೆರವಿನಿಂದ ಇವುಗಳನ್ನು ಹಿಡಿದಿದ್ದರು ಅಥವಾ ಅಲ್ಲಿಂದ ಓಡಿಸಿದ್ದರು. ಈವರೆಗೆ ಕೇರಳದಲ್ಲಿ 60ಕ್ಕೂ ಹೆಚ್ಚು ಮಂದಿಗೆ ಹಾವು ಕಚ್ಚಿದ ಪ್ರಕರಣಗಳು ವರದಿಯಾಗಿವೆ. ಆದೃಷ್ಟವಶಾತ್ ಇದರಿಂದ ಯಾವುದೇ ಸಾವು ಸಂಭವಿಸಿಲ್ಲ.

Facebook Comments

Sri Raghav

Admin