ಕೊಡಗಿನಲ್ಲಿ ನೀರವ ಮೌನ, ಬದುಕು ಕಟ್ಟಿಕೊಳ್ಳುವುದೇ ಸಂತ್ರಸ್ತರ ದೊಡ್ಡ ಸವಾಲು

ಈ ಸುದ್ದಿಯನ್ನು ಶೇರ್ ಮಾಡಿ

Kodaku
ಕೊಡಗು, ಆ.25- ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗಿನಲ್ಲಿ ಸ್ಮಶಾನ ಮೌನ ಆವರಿಸಿದೆ. ಮೂಕ ಪ್ರಾಣಿಗಳು ಆಹಾರಕ್ಕಾಗಿ ಕಂಡ ಕಂಡವರ ಹಿಂದೆ ಹೋಗುತ್ತಿವೆ. ಜಾನುವಾರುಗಳಿಗೆ ಸೂಕ್ತ ಮೇವು, ನೀರು ಸಿಗದೆ ಸೊರಗುತ್ತಿವೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಪ್ರವಾಹ, ಭೂ ಕುಸಿತದಿಂದಾಗಿ ಜರ್ಝರಿತವಾಗಿರುವ ಮಡಿಕೇರಿ ತಾಲೂಕಿನ ಜೋಡುಪಾಲ ಸುತ್ತಮುತ್ತಲ ಗ್ರಾಮಗಳಲ್ಲಿ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದೆ. ಆಹಾರ ಇಲ್ಲದೆ ಮೂಕ ಪ್ರಾಣಿಗಳ ಆರ್ತನಾದ ಮುಗಿಲು ಮುಟ್ಟಿದೆ. ಭೂ ಕುಸಿತದಿಂದ ಗ್ರಾಮದ ಜನರು ಮನೆಗಳನ್ನು ಖಾಲಿ ಮಾಡಿಕೊಂಡು ನಿರಾಶ್ರಿತರ ಶಿಬಿರ ಹಾಗೂ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಜೋಡುಪಾಲದ ಒಂದೇ ಒಂದು ಮನೆಯಲ್ಲೂ ಜನರಿಲ್ಲ. ಎಲ್ಲ ಮನೆಗಳೂ ಬಿಕೋ ಎನ್ನುತ್ತಿವೆ. ರಸ್ತೆ ಸಂಚಾರ ಬಂದ್ ಆಗಿರುವುದರಿಂದ ವಾಹನ ಸಂಚಾರವೂ ಇಲ್ಲ. ಹಾಗಾಗಿ ಇಲ್ಲಿ ಸ್ಮಶಾನಮೌನ ಆವರಿಸಿದೆ. ಜೋಡುಪಾಲ, ಮಣ್ಣಂಗೇರಿ ಗ್ರಾಮಗಳಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ಜಾಗ ವಾಸಕ್ಕೆ ಯೋಗ್ಯವೇ ಎಂದು ಅಧಿಕಾರಿಗಳು ಪರಿಶೀಲಿಸಿ ಆದೇಶ ಹೊರಡಿಸಿದ ಬಳಿಕವಷ್ಟೇ ಜನರು ಗ್ರಾಮಕ್ಕೆ ಹಿಂದಿರುಗಬೇಕು. ಅಲ್ಲಿಯವರೆಗೆ ನಿರಾಶ್ರಿತರ ಶಿಬಿರದಲ್ಲೇ ಇರಬೇಕು. ಉಳಿದಂತೆ ಸುತ್ತಮುತ್ತಲ ಗ್ರಾಮದ ಜನರು ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ. ಆದರೆ, ಅಲ್ಲಿಯೂ ಕೂಡ ಹೆಚ್ಚಿನ ಮನೆಗಳು ಬಿರುಕುಬಿಟ್ಟಿವೆ.ಹತ್ತಾರು ವರ್ಷಗಳಿಂದ ಇಲ್ಲೇ ಬದುಕಿ ಬಾಳುತ್ತಿದ್ದವರು ತಮ್ಮ ಮನೆಗಳು ಕುಸಿದು ಬಿದ್ದಿರುವುದು, ಬಿರುಕು ಬಿಟ್ಟಿರುವುದನ್ನು ಕಂಡು ಕಂಗಾಲಾಗಿದ್ದಾರೆ.

ದನ-ಕರುಗಳು ಹಾಗೂ ಸಾಕಿದ ಪ್ರಾಣಿಗಳು ಬೀದಿ ಪಾಲಾಗಿರುವುದನ್ನು ನೋಡಿ ಮಮ್ಮಲ ಮರುಗುತ್ತಿದ್ದಾರೆ. ಆ ಪ್ರಾಣಿಗಳು ಕೂಡ ಗ್ರಾಮಗಳಿಗೆ ಬರುವ ಅಧಿಕಾರಿಗಳು, ಜನರ ಹಿಂದೆ ಆಹಾರಕ್ಕಾಗಿ ಓಡಾಡುತ್ತಿದ್ದ ದೃಶ್ಯ ಎಂಥವರ ಮನವನ್ನೂ ಕಲಕುತ್ತಿತ್ತು. ಪ್ರಕೃತಿ ವಿಕೋಪಕ್ಕೆ ಸಿಲುಕಿ ಹಲವೆಡೆ ಮಣ್ಣಿನಡಿ ಸಿಲುಕಿದವರು ಇನ್ನೂ ಪತ್ತೆಯಾಗಿಲ್ಲ. ಅವರ ಹುಡುಕಾಟಕ್ಕೆ ಸೇನಾ ಕಾರ್ಯಾಚರಣೆ ಮುಂದುವರಿದಿದೆ. ಒಂದು ವಾರ ಕಳೆದರೂ ಅವರ ನೋವಿನಲ್ಲೇ ಕಾಲ ಕಳೆಯುತ್ತಿರುವವರ ಪರಿಸ್ಥಿತಿ ಹೇಳತೀರದಾಗಿದೆ.

ಮಡಿಕೇರಿ ತಾಲೂಕು ಕಾಲೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಸೋಮಶೇಖರ್ ಅವರ ಮಗ ಮಣ್ಣಿನಡಿ ಸಿಲುಕಿ ಹೋಗಿದ್ದಾರೆ. ಶೆಡ್‍ವೊಂದರಲ್ಲಿ ಬದುಕುತ್ತಿದ್ದ ಅವರು ಭಾರೀ ಮಳೆಗೆ ಗುಡ್ಡ ಕುಸಿದು ಮನೆ ಕುಸಿದುಬಿತ್ತು. ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಅವರ ಮನೆಯೊಳಗೆ ನೀರು ನುಗ್ಗಿತ್ತು. ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಮಕ್ಕಳೊಂದಿಗೆ ಮನೆಯಿಂದ ಹೊರಬಂದರು. ಅಷ್ಟರೊಳಗೆ ಏಳು ವರ್ಷದ ಮಗ ಗಗನ್ ಕಾವೇರಪ್ಪ ಮಣ್ಣಿನ ಆಳಕ್ಕೆ ಹೂತು ಹೋಗಿದ್ದ. ಮಗನನ್ನು ರಕ್ಷಿಸಲು ಎಷ್ಟೇ ಪ್ರಯತ್ನಿಸಿದರೂ ಆಗಲಿಲ್ಲ. ಮತ್ತೊಬ್ಬ ಮಗ ಮುತ್ತಪ್ಪನನ್ನಾದರೂ ರಕ್ಷಿಸಿಕೊಳ್ಳಬೇಕೆಂದು ಆತನೊಂದಿಗೆ ಕಾಲುದಾರಿಯಲ್ಲಿ ನಡೆದು ರಾತ್ರೋರಾತ್ರಿ ತಮ್ಮ ಸಂಬಂಧಿಕರ ಮನೆ ತಲುಪಿದ್ದರು. ಸದ್ಯ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯದಲ್ಲಿರುವ ಅವರು ಮಗನ ಶೋಧ ಕಾರ್ಯ ನಡೆಯುತ್ತಿದೆ. ಆದರೆ, ಈವರೆಗೆ ಸುಳಿವು ಸಿಕ್ಕಿಲ್ಲ. ಈ ರೀತಿಯ ಹಲವಾರು ಘಟನೆಗಳು ಕೊಡಗಿನಲ್ಲಿ ನಡೆದಿವೆ. ಒಬ್ಬೊಬ್ಬರದೂ ಒಂದೊಂದು ಕಥೆ-ವ್ಯಥೆ ಇದೆ. ಮಾಲೀಕರದ್ದೊಂದು ಕಥೆಯಾದರೆ, ಕಾರ್ಮಿಕರದ್ದೊಂದು ನೋವಿದೆ.  ನೋವು, ದುಃಖ-ದುಮ್ಮಾನಗಳ ನಡುವೆ ಕೊಡಗು ಸಹಜ ಸ್ಥಿತಿಯತ್ತ ಹೊರಳುತ್ತಿದೆ.

Facebook Comments