ಇನ್ನು15 ದಿನದಲ್ಲಿ ಸಮ್ಮಿಶ್ರ ಸರ್ಕಾರ ಢಮಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Govt--01

ಬೆಳಗಾವಿ,ಆ.25- ಇನ್ನು ಹದಿನೈದು ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್‍ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಎಂದು ಬೆಳಗಾವಿ ಸಂಸದ ಸುರೇಶ್ ಅಂಗಡಿ ಹೊಸ ಬಾಂಬ್ ಸಿಡಿಸಿದ್ದಾರೆ. ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ ಬೆನ್ನಲ್ಲೇ ಸುರೇಶ್ ಅಂಗಡಿ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನು 15 ದಿನದೊಳಗೆ ಸಮ್ಮಿಶ್ರ ಸರ್ಕಾರ ಪತನವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರ ಪತನವಾದರೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ , ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಸೂಚ್ಯವಾಗಿ ಪ್ರತಿಕ್ರಿಯಿಸಿದರು. ಇದು ಯಾವುದೇ ತತ್ವ ಸಿದ್ದಾಂತಗಳ ಆಧಾರದ ಮೇಲೆ ಸರ್ಕಾರ ರಚನೆಯಾಗಿಲ್ಲ. ಕೇವಲ ಹೊಂದಾಣಿಕೆಗೆ ಮಾತ್ರ ಸರ್ಕಾರ ರಚನೆಯಾಗಿದೆ. ಹೆಚ್ಚುದಿನ ಬಾಳಿಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಎತ್ತು ಏರಿಗೆ ಕೋಣ ನೀರಿಗೆ ಎಂಬಂತೆ ಸರ್ಕಾರ ಹಾಗೋಹೀಗೋ ನಡೆಯುತ್ತಿದೆ ಎಂದರು. ಬಲವಂತವಾಗಿ ಇಲ್ಲವೇ ಒತ್ತಾಯಪೂರ್ವಕವಾಗಿ ಮಾಡಿದ ಮದುವೆಗಳು ಬಹಳ ದಿನ ಕೂಡಿ ಇರುವುದಿಲ್ಲ. ಈಗಾಗಲೇ ಸಿದ್ದರಾಮಯ್ಯನವರು ಚಾಪೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಹಿಂದೆ ಪ್ರಧಾನಿಯಾಗಿದ್ದಾಗ ದೇವೇಗೌಡರಿಗೆ ಕಾಂಗ್ರೆಸ್ ಬೆಂಬಲ ಹಿಂತೆಗೆದುಕೊಳ್ಳುವ ಮೂಲಕ ಮೋಸ ಮಾಡಿತ್ತು. ಈಗ ಅದೇ ಕಾಂಗ್ರೆಸ್ ಅವರ ಪುತ್ರ ಕುಮಾರಸ್ವಾಮಿಗೂ ಅದನ್ನೇ ಮಾಡುವುದಿಲ್ಲ ಎಂಬುದಕ್ಕೆ ಖಾತ್ರಿಯಿಲ್ಲ ಎಂದರು.  ಕಾಂಗ್ರೆಸ್ ಹಿಂದೆ ಸೀತಾರಾಮ್ ಕೇಸರಿ ಸೇರಿದಂತೆ ಅನೇಕ ನಾಯಕರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ. ಈಗ ಜೆಡಿಎಸ್‍ಗೂ ಅದೇ ಸ್ಥಿತಿ ಬರಲಿದ್ದು, ಸದ್ಯದಲ್ಲೇ ರಾಜ್ಯ ರಾಜಕಾರಣದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಿ ಎನ್ನುವ ಮೂಲಕ ಇನ್ನಷ್ಟು ಕುತೂಹಲ ಕೆರಳಿಸಿದರು.  ಒಂದೆಡೆ ಸಿದ್ದರಾಮಯ್ಯ ನಿನ್ನೆ ನೀಡಿರುವ ಹೇಳಿಕೆ ಮತ್ತೊಂದೆಡೆ ಬಿಜೆಪಿ ಕೆಲವು ಶಾಸಕರನ್ನು ಸೆಳೆದು ಸರ್ಕಾರ ರಚನೆ ಮಾಡಲಿದೆ ಎಂಬ ವದಂತಿಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಸುರೇಶ್ ಅಂಗಡಿಯ ಹೇಳಿಕೆ ಹಲವು ವ್ಯಾಖ್ಯಾನಗಳನ್ನು ಹುಟ್ಟಿ ಹಾಕಿದೆ.

Facebook Comments

Sri Raghav

Admin