ಕೊಡಗಿಗಾಗಿ ಸಿಎಂ ಪರಿಹಾರ ನಿಧಿಗೆ ಹರಿದು ಬಂದ ಒಟ್ಟು ದೇಣಿಗೆ ಎಷ್ಟು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

CM--01414

ಬೆಂಗಳೂರು, ಆ.25-ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಅನಾಹುತ ಸಂಭವಿಸಿ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಮತ್ತಿತರ ಜಿಲ್ಲೆಗಳ ನೆರವಿಗೆ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ನಿನ್ನೆಯವರೆಗೆ 25,16,89,808ರೂ. ದೇಣಿಗೆ ನೀಡಲಾಗಿದೆ.  ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಈ ಪ್ರಮಾಣದ ಹಣ ಸಂದಾಯವಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿ, ಪ್ರಕೃತಿ ವಿಕೋಪ -2018ರ ಖಾತೆಗೆ ಧನಾದೇಶ ಅಥವಾ ಡಿಡಿ ಮೂಲಕ 13,59,90,418 ರೂ. ಸಂದಾಯವಾಗಿದೆ. ಒಟ್ಟು 153 ಡಿಡಿಗಳು ಸಲ್ಲಿಕೆಯಾಗಿವೆ.

ಪೇಟಿಯಂ ಒಳಗೊಂಡಂತೆ ಆನ್‍ಲೈನ್ ಮೂಲಕ 9,06,99,390 ರೂ.ಗಳು ಸಲ್ಲಿಕೆಯಾಗಿದೆ. ರಾಜ್ಯಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಎರಡೂವರೆ ಕೋಟಿ ರೂ. ನೀಡುವ ಭರವಸೆ ನೀಡಿದ್ದು, ಅದೇ ರೀತಿ ಸಂಘ-ಸಂಸ್ಥೆಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡುವ ಭರವಸೆ ನೀಡಿವೆ.  ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಲ್ಲಿ ನೊಂದ ಸಂತ್ರಸ್ತರಿಗೆ ಸಹಾಯ ಮಾಡುವ ದಾನಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿ, ಪ್ರಕೃತಿ ವಿಕೋಪ-2018ರ ಖಾತೆಗೆ ದೇಣಿಗೆ ಸಲ್ಲಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

19.41ಕೋಟಿ ರೂ. ದೇಣಿಗೆ:
ಧಾರ್ಮಿಕ ದತ್ತಿ ಮತ್ತು ಗಣಿ, ಭೂವಿಜ್ಞಾನ ಇಲಾಖಾ ವ್ಯಾಪ್ತಿಯ ಸಂಸ್ಥೆಗಳಿಂದ ಇಂದು ಸಂಜೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು 19.41 ಕೋಟಿ ರೂ. ದೇಣಿಗೆ ನೀಡಲಾಗುತ್ತದೆ.  ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಆಯ್ದ ದೇವಾಲಯಗಳ ನಿಧಿಯಿಂದ 11.91 ಕೋಟಿ ರೂ., ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ಸ್ ನಿಂದ 5 ಕೋಟಿ ರೂ. ಹಟ್ಟಿ ಚಿನ್ನದ ಗಣಿ ಕಂಪೆನಿಯಿಂದ 2.50 ಕೋಟಿ ರೂ. ಸಂಗ್ರಹಿಸಲಾಗಿದ್ದು, ಇಂದು ಸಂಜೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಿಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ದೇಣಿಗೆಯ ಚೆಕ್ ನೀಡಲಿದ್ದಾರೆ.

ವಿಧಾನಸೌಧದ ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖೆಯ ಖಾತೆ ಸಂಖ್ಯೆ:37887098605, ಐಎಫ್‍ಎಸ್‍ಸಿ ಕೋಡ್: ಎಸ್‍ಟಿಐಎನ್ 0040277, ಎಂಐಸಿಆರ್ ಸಂಖ್ಯೆ: 560002419 ಆಗಿರುತ್ತದೆ.

Facebook Comments

Sri Raghav

Admin