ಬಾರ್’ನ ಬಾಗಿಲಿನಲ್ಲಿ ದಾರಿ ಬಿಡುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Murder

ಬೆಂಗಳೂರು, ಆ.25- ಬಾರ್‍ನಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬನಶಂಕರಿ ದೇವಸ್ಥಾನ ಹಿಂಭಾಗದ ಸರಬಂಡೆ ನಿವಾಸಿ ಚಂದ್ರು (35) ಕೊಲೆಯಾದ ದುರ್ದೈವಿ. ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕರಾಗಿದ್ದ ಚಂದ್ರು ರಾತ್ರಿ ಮೂವರು ಸ್ನೇಹಿತರೊಂದಿಗೆ ಮನೆ ಸಮೀಪದ ಕದಿರೇನಹಳ್ಳಿ ಕ್ರಾಸ್‍ನಲ್ಲಿರುವ ಆರ್‍ಕೆ ಬಾರ್‍ಗೆ ತೆರಳಿದ್ದರು. ಸ್ನೇಹಿತರೊಂದಿಗೆ ಮದ್ಯ ಸೇವಿಸಿದ ನಂತರ ಆತ್ರಿ 10.45ರಲ್ಲಿ ಬಿಲ್ ಕೊಡಲು ಚಂದ್ರು ಕೌಂಟರ್ ಬಳಿ ಬಂದಿದ್ದಾರೆ.

ಈತ ಬಿಲ್ ಕೊಡುತ್ತಿದ್ದಾಗ ಬಾರ್‍ಗೆ ನಾಲ್ಕು ಮಂದಿ ಬಂದಿದ್ದಾರೆ. ಈ ಬಾರ್‍ನ ಎಂಟ್ರೆನ್ಸ್ ಕಿರಿದಾದ್ದರಿಂದ ಇವರು ಬರುತ್ತಲೇ ಜಾಗ ಬಿಡುವಂತೆ ಬಿಲ್ ಕೌಂಟರ್‍ನಲ್ಲಿದ್ದ ಚಂದ್ರು ಜತೆ ರೇಗಿದ್ದಾರೆ.  ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ ಚಾಕುವಿನಿಂದ ಚಂದ್ರು ಕುತ್ತಿಗೆಗೆ ಅಪರಿಚಿತ ವ್ಯಕ್ತಿ ಬಲವಾಗಿ ಇರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಸ್ನೇಹಿತರು ಈತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಶವವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸುದ್ದಿ ತಿಳಿದ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin