ರಾಜ್ಯದ ಮೂವರು ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Teachers--01

ಬೆಂಗಳೂರು, ಆ.25- ಉತ್ತಮ ಸೇವೆ ಸಲ್ಲಿಸಿದ ರಾಜ್ಯದ ಮೂವರು ಶಿಕ್ಷಕರು ಸೇರಿದಂತೆ ರಾಷ್ಟ್ರದ ಒಟ್ಟು 45 ಶಿಕ್ಷಕರಿಗೆ ಈ ಬಾರಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಲಭಿಸಿದೆ.  ಸೆಪ್ಟೆಂಬರ್ 5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕದ ಶಿಕ್ಷಕರಾದ ಡಾ.ಜಿ.ರಮೇಶಪ್ಪ, ಎಂ.ಶಿವಕುಮಾರ್, ಆರ್.ಎನ್.ಶೈಲಾ ಅವರು ಸಲ್ಲಿಸಿರುವ ಸೇವೆಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಲಭಿಸಿದ್ದು, ಸೆ.5ರಂದು ರಾಷ್ಟ್ರಪತಿಯವರು ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಒಟ್ಟಾರೆ ಎಲ್ಲ ರಾಜ್ಯಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ 45 ಶಿಕ್ಷಕರನ್ನು ಈ ಬಾರಿಯ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅದರಲ್ಲಿ ಕರ್ನಾಟಕದಿಂದ ಮೂವರು ಭಾಜನರಾಗಿದ್ದಾರೆ.

ಬೆಂಗಳೂರು ಉತ್ತರ ತಾಲೂಕು ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ವಿಜ್ಞಾನ ವಿಷಯ ಪರೀಕ್ಷಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶೈಲಾ ಅವರಿಗೆ ಈ ಪ್ರಶಸ್ತಿ ದೊರೆತಿದೆ. ಎಂ.ಎಸ್ಸಿ. ಎಂ.ಎಡ್, ಎಂ ಫಿಲ್ ವಿದ್ಯಾಭ್ಯಾಸ ಪೂರೈಸಿರುವ ಇವರು 1994ರಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, 24 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.  ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು, ಚಿಕ್ಕಬಳ್ಳಾಪುರ, ಕೊರಟಗೆರೆಯ ಬುಕ್ಕಾಪಟ್ಟಣ, ಬೆಂಗಳೂರಿನ ಟಿ.ದಾಸರಹಳ್ಳಿ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ಇವರಿಗೆ 2013ರಲ್ಲಿ ಕೆಂಪೇಗೌಡ ಪ್ರಶಸ್ತಿ, ಸರ್ಕಾರದ ಆಡಳಿತಾತ್ಮಕ ಪ್ರಶಸ್ತಿ, ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಸೇರಿದಂತೆ 34 ಪ್ರಶಸ್ತಿಗಳು ಸಂದಿವೆ. ಇವರೂ ಸೇರಿದಂತೆ ಮೂವರು ಪ್ರಶಸ್ತಿ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಚಿ.ಮಂಗಲ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರಾದ ಡಾ.ಶಿವಕುಮಾರ್,ಭವಿಷ್ಯದಲ್ಲಿ ಇಂಟರ್‍ನೆಟ್ ಆಧಾರಿತ ಮಕ್ಕಳ ಶಿಕ್ಷಣದ ಕುರಿತಂತೆ ಆಸಕ್ತಿ ಹೊಂದಿದ್ದಾರೆ. ಎಂಎಸ್ಸಿ , ಬಿಎಡ್ ಪೂರೈಸಿರುವ ಇವರು ಮೆಲೆನಿಯಮ್ ಜನರೇಷನ್ ವಿದ್ಯಾರ್ಥಿಗಳಿಗೆ ಇಂಟರ್‍ನೆಟ್ ಮೊಬೈಲ್ ಅಪ್ಲಿಕೇಷನ್‍ನಂತಹ ಸಲಕರಣೆಗಳ ಮೂಲಕವೇ ಶಿಕ್ಷಣ ನೀಡಿದರೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂಬ ಕಾರಣದಿಂದ ಮೂರು ಮೊಬೈಲ್ ಅಪ್ಲಿಕೇಷನ್‍ಗಳನ್ನು ರೂಪಿಸಿರುವ ಇವರು ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ.

ಇವರನ್ನು 300ಕ್ಕೂ ಹೆಚ್ಚು ಮಂದಿ ಯೂಟ್ಯೂಬ್ ಮುಖಾಂತರ ಫಾಲೊ ಮಾಡುತ್ತಿದ್ದು, ಇದರಲ್ಲಿ ಸರಳ ಗಣಿತ ಸೂತ್ರಗಳ ಕಲಿಕೆ ಸೇರಿದಂತೆ ಕಲಿಕಾ ಮಾಧ್ಯಮದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. 200ಕ್ಕೂ ಹೆಚ್ಚು ಸಾಫ್ಟ್ ಸ್ಕಿಲ್ ಟ್ರೈನಿಂಗ್ ಕುರಿತಂತೆ ತರಗತಿಗಳನ್ನು ಉಚಿತವಾಗಿ ರಜಾ ದಿನಗಳಲ್ಲಿ ನಡೆಸಿರುವ ಇವರು ಶಿಕ್ಷಕರಾಗಿ 14 ವರ್ಷಗಳ ಸೇವೆ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಭವಿಷ್ಯದ ಶಿಕ್ಷಣದಲ್ಲಿ ಇಂಟರ್‍ನೆಟ್ ಆಧರಿಸಿ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಹೆಚ್ಚಿನ ಅನುಕೂಲವಿದೆ ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದ್ದರು. ದೇವನಹಳ್ಳಿ ಬಳಿಯ ವಿಜಯಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿರುವ ಡಾ.ಜಿ.ರಮೇಶಪ್ಪ ಅವರು ವಿಕಲಚೇತನ ಮಕ್ಕಳನ್ನು ಗುರುತಿಸಿ ಕ್ರೀಡಾ ತರಬೇತಿ ನೀಡುವ ಮೂಲಕ ಅವರನ್ನು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.

ಮೂಲತಃ ಹೊಸಕೋಟೆ ತಾಲ್ಲೂಕಿನವರಾದ ಇವರು ಎಂಎ, ಪಿಎಚ್‍ಡಿ ಪೂರೈಸಿದ್ದು, ವಿಕಲಚೇತನ ಮಕ್ಕಳಿಗೆ ವಿಶೇಷವಾಗಿ ಕ್ರೀಡಾ ತರಬೇತಿ ನೀಡುವ ಬಗ್ಗೆ ಹೆಚ್ಚು ಆಸಕ್ತಿ ತಳೆದು ಕೆಲಸ ಮಾಡುತ್ತಿದ್ದಾರೆ. ಇವರು ಸಹ ಕೇಂದ್ರ ಸರ್ಕಾರದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Facebook Comments

Sri Raghav

Admin