ಪಾಕ್’ಗೆ ಹೋಗಲು ಸಜ್ಜಾಗಿದ್ದ ನಾಲ್ವರು ಉಗ್ರರನ್ನು ಸೆರೆಹಿಡಿದ ಯೋಧರು

ಈ ಸುದ್ದಿಯನ್ನು ಶೇರ್ ಮಾಡಿ

Terrorist--01
ಶ್ರೀನಗರ (ಪಿಟಿಐ), ಆ.26- ಭಯೋತ್ಪಾದನೆ ಸಂಘಟನೆಗೆ ಸೇರ್ಪಡೆಯಾಗಿ ಪಾಕಿಸ್ತಾನಕ್ಕೆ ಹೋಗಲು ಸಜ್ಜಾಗಿದ್ದ ನಾಲ್ವರು ಯುವ ಉಗ್ರಗಾಮಿಗಳನ್ನು ಯೋಧರು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೆರೆ ಹಿಡಿದಿದ್ದಾರೆ. ಈ ನಾಲ್ವರು ಉಗ್ರಗಾಮಿಗಳು ಇತ್ತೀಚೆಗಷ್ಟೇ ಅಲ್-ಬದ್ರ್ ಉಗ್ರಗಾಮಿ ಸಂಘಟನೆಗೆ ಸೇರಿದ್ದರು. ಬಂಧಿತರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಮೂಲಕ ಪಾಕಿಸ್ತಾನ ಗಡಿ ಸೇರಿಲು ನಾಲ್ವರು ಹೊಸ ಉಗ್ರಗಾಮಿಗಳು ಯತ್ನಿಸುತ್ತಿದ್ದಾರೆ. ಇದಕ್ಕೆ ನಿಷೇಧಿತ ಅಲ್-ಬದ್ರ್ ಉಗ್ರಗಾಮಿ ಸಂಘಟನೆಯ ಮೂವರು ಭಯೋತ್ಪಾದಕರು ಕುಮ್ಮುಕ್ಕು ನೀಡುತ್ತಿದ್ದಾರೆ ಎಂಬ ಭದ್ರತಾ ಪಡೆಗಳಿಗೆ ಖಚಿತ ಮಾಹಿತಿ ಲಭಿಸಿತು.

ಈ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಯೋಧರು ಜಂಟಿ ಕಾರ್ಯಾಚರಣೆ ನಡೆಸಿ, ಹಿಂಡ್ವಾರಾದ ಕಾಲರೂಸ್‍ನಲ್ಲಿ ಬಲೆ ಬೀಸಿ ಕಾಯುತ್ತಿದ್ದರು. ಎಲ್‍ಒಸಿ ಗಡಿ ಮೂಲಕ ಪಾಕಿಸ್ತಾನದತ್ತ ನುಸುಳಲು ಇವರು ಸಜ್ಜಾಗಿದ್ದಾಗ ಅವರನ್ನು ಸೆರೆಹಿಡಿಯಲು ಯೋಧರು ಮುಂದಾದಾಗ ಕೆಲ ಕಾಲ ಗುಂಡಿನ ಕಾಳಗ ನಡೆಯಿತು. ನಂತರ ನಾಲ್ವರು ಉಗ್ರರು ಯೋಧರಿಗೆ ಶರಣಾಗತರಾದರು. ಅವರನ್ನು ಬಂಧಿಸಲಾಗಿದೆ ಎಂದು ಶ್ರೀನಗರದ ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.

ಹೊಸದಾಗಿ ನೇಮಕಗೊಂಡಿದ್ದ ನಾಲ್ವರು ಭಯೋತ್ಪಾದಕರು ಶರಣಾಗತರಾಗಿದ್ದಾರೆ. ಬಂಧಿತರಿಂದ ರೈಫಲ್‍ಗಳು, ಬುಲೆಟ್‍ಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಅಲ್-ಬದ್ರ್‍ನ ಇತರ ಮೂವರು ಉಗ್ರರಿಗಾಗಿ ಶೋಧ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin