ರೋಗ ನಿವಾರಣೆ ಸೋಗಿನಲ್ಲಿ ಮಹಿಳೆಯ ರನ್ನು ಚುಂಬಿಸುತ್ತಿದ್ದ ‘ಕಿಸ್ಸಿಂಗ್ ಬಾಬಾ’ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Kissing-baba--01
ಗುವಾಹತಿ (ಪಿಟಿಐ), ಆ.26-ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ನನ್ನ ಚಮತ್ಕಾರಿ ಚುಂಬನದಿಂದ ಗುಣಪಡಿಸುವುದಾಗಿ ಹೇಳಿಕೊಂಡು ಮಹಿಳೆಯರನ್ನು ಆಲಂಗಿಸಿಕೊಂಡು ಚುಂಬಿಸುತ್ತಿದ್ದ ಸ್ವಯಂಘೋಷಿತ ಮಿರಾಕಲ್ ಕಿಸ್ಸಿಂಗ್ ಬಾಬಾ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ರಾಮ್ ಪ್ರಕಾಶ್ ಚೌಹಾಣ್ ಅಲಿಯಾಸ್ ಕಿಸ್ಸಿಂಗ್ ಬಾಬಾ ಬಂಧಿತ ವಂಚಕ ಸಾಧು. ಈತನನ್ನು ಅಸ್ಸಾಂನ ಮೊರಿಗಾಂವ್‍ನ ಭೋರಲ್‍ಟುಪ್ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ತಾನು ಭಗವಾನ್ ವಿಷ್ಣುವಿನಿಂದ ದೈವಿಕ ಶಕ್ತಿಗಳನ್ನು ಹೊಂದಿದ್ದೇನೆ. ಚಮತ್ಕಾರಿ ಚುಂಬನದ ಮೂಲಕ ಮಹಿಳೆಯರ ಮಾನಸಿಕ ಮತ್ತು ದೈಹಿಕ ರೋಗಗಳನ್ನು ಗುಣಪಡಿಸುವ ದೈವದತ್ತ ಶಕ್ತಿ ನನಗೆ ಒಲಿದಿದೆ ಎಂದು ಆತ ಹೇಳಿಕೊಂಡು ಮಾನಿನಿಯರನ್ನು ತಬ್ಬಿಕೊಂಡು ಚುಂಬಿಸುತ್ತಿದ್ದ.

ಆತನ ತಾಯಿ ಕೂಡ ಇದಕ್ಕೆ ಸಾಥ್ ನೀಡುತ್ತಿದ್ದಳು. ನನ್ನ ಮಗನಲ್ಲಿ ಚಿಕಿತ್ಸಕ ಗುಣವಿದೆ. ವಿವಾಹಿತ ಸ್ತ್ರೀಯರಿಗೆ ಎದುರಾಗುವ ಯಾವುದೇ ರೀತಿ ತೊಂದರೆಗಳನ್ನು ರಾಮ್ ಪ್ರಕಾಶ್ ಬಗೆಹರಿಸಬಲ್ಲ ಎಂದು ಪ್ರಚಾರ ಮಾಡಿದ್ದಳು. ಇದಕ್ಕಾಗಿ ಈ ನಕಲಿ ಬಾಬಾ ತನ್ನ ಮನೆಯಲ್ಲೇ ಒಂದು ಪುಟ್ಟ ದೇವಾಲಯ ನಿರ್ಮಿಸಿಕೊಂಡು ಕೆಲವು ದಿನಗಳಿಂದ ಆಲಿಂಗನ ಮತ್ತು ಚುಂಬನ ಚಿಕಿತ್ಸೆ ಆರಂಭಿಸಿದ್ದ. ಮೂಢನಂಬಿಕೆಗಳನ್ನು ಹೊಂದಿದ್ದ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಈತ ತನ್ನ ಕಾಮತೃಷೆಗಾಗಿ ಬಳಸಿಕೊಂಡಿದ್ದ ಎಂಬ ದೂರುಗಳ ಹಿನ್ನೆಲೆಯಲ್ಲಿ ಪೊಲೀಸರು ಕಿಸ್ಸಿಂಗ್ ಬಾಬಾ ಈಗ ಕಂಬಿ ಎಣಿಸುವಂತೆ ಮಾಡಿದ್ದಾರೆ.

ಮೊರಿಗಾಂವ್ ಪ್ರದೇಶದ ಜನರು ಶತಶತಮಾನಗಳಿಂದ ಮೂಢನಂಬಿಕೆ, ಕಂದಾಚಾರ-ವಾಮಾಚಾರಗಳಲ್ಲಿ ಬಲವಾದ ನಂಬಿಕೆ ಹೊಂದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಈತ ಚಮತ್ಕಾರಿ ಚುಂಬನ ಚಿಕಿತ್ಸೆ ಹೆಸರಿನಲ್ಲಿ ಭೋರಲ್‍ಟುಪ್ ಗ್ರಾಮದಲ್ಲಿ ಹೆಸರುವಾಸಿಯಾಗಿದ್ದ. ಈತನ ವಿರುದ್ಧ ಕೆಲವು ಅಕ್ರಮ ಚಟುವಟಿಕೆಗಳ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಿಸ್ಸಿಂಗ್ ಬಾಬಾನಿಗೆ ಈಗ ಲಾಠಿ ಏಟಿನ ರುಚಿ ತೋರಿಸಿದ್ದಾರೆ.

Facebook Comments

Sri Raghav

Admin