‘ಮುಂದಿನ ಸಿಎಂ ನಾನೇ’ ಎಂದ ಮಾಜಿ ಸಿಎಂ ಸಿದ್ದರಾಮಯ್ಯ..!
ಮೈಸೂರು, ಆ.26- ಮುಂದಿನ ಬಾರಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ. ನಾನೇ ಮುಖ್ಯಮಂತ್ರಿಯಾಗಬೇಕೆಂಬುದು ರಾಜ್ಯದ ಜನರ ಆಶಯವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇನ್ನು ಐದು ವರ್ಷ ಯಾವುದೇ ಚುನಾವಣೆ ಇಲ್ಲ. ಮುಂದಿನ ಬಾರಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಹಿಂದಿನ ಚುನಾವಣೆಯಲ್ಲಿ ಬಿಜೆಪಿಯವರ ಅತಿ ಅಪಪ್ರಚಾರದಿಂದ ನಮಗೆ ಸೋಲಾಯಿತು. ಅವರ ಪೊಳ್ಳುತನ ಜನರಿಗೆ ಈಗ ಅರ್ಥವಾಗಿದೆ. ಹೀಗಾಗಿ ಜನರು ಪಾಲಿಕೆ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡುವ ನಂಬಿಕೆ ಇದೆ. ಮೈಸೂರು ಜನರ ನಾಡಿಮಿಡಿತ ನನಗೆ ಗೊತ್ತಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ. ಜನರ ಆಶೀರ್ವಾದವಿದ್ದರೆ ಮತ್ತೆ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು. ಪರಿಹಾರ ನೀಡುವ ವಿಷಯದಲ್ಲಿ ಬಿಜೆಪಿಯವರು ಮಲತಾಯಿ ಧೋರಣೆ ತೋರಿಸುವಲ್ಲಿ ನಿಸ್ಸೀಮರು. ಕೊಡಗಿನಲ್ಲಿ ಇಷ್ಟು ಅನಾಹುತವಾಗಿರುವಾಗ ಕೇಂದ್ರ ಸರ್ಕಾರ ತುರ್ತಾಗಿ ಪರಿಹಾರ ಘೋಷಣೆ ಮಾಡಬೇಕಿತ್ತು. ನಾವು ಕೊಡುವ ಮನವಿ ಪತ್ರಕ್ಕಾಗಿ ಕಾಯಬೇಕೆ? ಕೊಡಗಿಗೆ ಬಂದಾಗ ರಕ್ಷಣಾ ಸಚಿವರ ನಡವಳಿಕೆ ಅತಿಯಾಗಿತ್ತು. ಕೇಂದ್ರ ಸಚಿವರ ರೀತಿ ಅವರು ನಡೆದುಕೊಳ್ಳಲಿಲ್ಲ ಎಂದು ಹೇಳಿದರು.
ಅವರು ಕೊಡಗಿಗೆ ಬಂದು ಹೋದರಷ್ಟೆ. ನಯಾಪೈಸೆ ಪರಿಹಾರ ಘೋಷಣೆ ಮಾಡಲಿಲ್ಲ. ಇದು ಸರಿಯೇ? ಪರಿಹಾರ ನೀಡುವುದು ಕೇಂದ್ರದ ಜವಾಬ್ದಾರಿ. ಶೀಘ್ರ ಕೇಂದ್ರ ಸರ್ಕಾರ ಒಂದು ಸಾವಿರ ಕೋಟಿ ರೂ.ಗಳ ಪರಿಹಾರ ಘೋಷಿಸಬೇಕು. ಕೊಡಗಿನ ಜನರ ನೆರವಿಗೆ ನಿಂತ ರಾಜ್ಯದ ಜನತೆಗೆ ನನ್ನ ನಮಸ್ಕಾರಗಳು ಎಂದು ಸಿದ್ದರಾಮಯ್ಯ ಹೇಳಿದರು.