ಆಸ್ತಿ ವಂಚನೆ ಪ್ರಕರಣ ಪತ್ತೆಗೆ ನೋಂದಣಿ-ನಗರಾಭಿವೃದ್ಧಿ ಸಾಫ್ಟ್ ವೇರ್ ಲಿಂಕ್

ಈ ಸುದ್ದಿಯನ್ನು ಶೇರ್ ಮಾಡಿ

Khadar-Minister

ಬೆಂಗಳೂರು, ಆ.27- ನಗರ ಪ್ರದೇಶಗಳಲ್ಲಿರುವ ಆಸ್ತಿಗಳ ನೋಂದಣಿ ವೇಳೆ ನಡೆಯುವ ಅಕ್ರಮಗಳನ್ನು ತಪ್ಪಿಸಲು ನಗರಾಭಿವೃದ್ಧಿ ಇಲಾಖೆ ಮತ್ತು ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಸಾಫ್ಟ್ ವೇರ್ ಗಳ ಜತೆ ಸಂಪರ್ಕ ಕಲ್ಪಿಸುವುದಾಗಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು.  ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ ಸಾಫ್ಟ್ ವೇರ್ ನ್ನು ನಿರ್ವಹಣೆ ಮಾಡುತ್ತಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಇ-ಖಾತಾ ಸಾಫ್ಟ್ ವೇರ್ ಅಸ್ತಿತ್ವದಲ್ಲಿದೆ. ಈ ಎರಡರ ನಡುವೆ ಸಂಪರ್ಕ ಇಲ್ಲ. ಹೀಗಾಗಿ ಆಸ್ತಿ ಖರೀದಿ ಮಾಡುವವರಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ರಿಯಲ್‍ಎಸ್ಟೇಟ್ ವ್ಯವಹಾರ ಮಾಡುವವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಇನ್ನು ಮುಂದೆ ನಗರಾಭಿವೃದ್ಧಿ ಇಲಾಖೆ ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಾಫ್ಟ್‍ವೇರ್ ಜತೆ ಸಂಪರ್ಕ ಕಲ್ಪಿಸಲಾಗುವುದು. ಆಸ್ತಿ ನೋಂದಣಿಗೆ ಸಬ್‍ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲ್ಲಿಸಿದಾಕ್ಷಣ ಇ-ಖಾತೆ ಸಾಫ್ಟ್‍ವೇರ್ ಮೂಲಕ ನೋಂದಣಿ ಮಾಡುವ ಆಸ್ತಿ ಯಾರ ಹೆಸರಿನಲ್ಲಿದೆ. ಈ ಹಿಂದೆ ಯಾವ ರೀತಿ ಪರಬಾರೆ ಆಗಿದೆ ಎಂಬೆಲ್ಲಾ ಸಮಗ್ರ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ನಕಲಿ ದಾಖಲೆಗಳ ಮೂಲಕ ಆಸ್ತಿ ಪರಬಾರೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಇನ್ನು ಮನೆ ನಿರ್ಮಾಣ ಪರವಾನಗಿ, ಲೇಔಟ್ ಅಪ್ರುವಲ್ ಸೇರಿದಂತೆ ನಿರ್ಮಾಣ ಕಾರ್ಯಗಳಿಗೆ ಅರ್ಜಿ ಸಲ್ಲಿಸಿದಾಗ ಆ ಆಸ್ತಿ ಯಾರ ಹೆಸರಿನಲ್ಲಿ ನೋಂದಣಿಯಾಗಿದೆ ಎಂಬ ಸ್ಪಷ್ಟ ಮಾಹಿತಿ ಕಾವೇರಿ ಸಾಫ್ಟವೇರ್ ಮೂಲಕ ಅರ್ಜಿ ದಾರರಿಗೆ ಲಭ್ಯವಾಗಲಿದೆ ಎಂದು ತಿಳಿಸಿದರು. ನಗರ ಪ್ರದೇಶಗಳಲ್ಲಿ ಮನೆ ನಿರ್ಮಿಸಲು ಸುಮಾರು 14 ವಿವಿಧ ಇಲಾಖೆಗಳು, ಕಚೇರಿಗಳಿಂದ ಅನುಮತಿ ಪಡೆಯಬೇಕಿದೆ. ಇದನ್ನು ತಪ್ಪಿಸಲು ಏಕಗವಾಕ್ಷಿ ಪದ್ದತಿ ಯೋಜನೆ ಜಾರಿಗೆ ತರಲಾಗುತ್ತಿದ್ದು, 24 ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯಾರಂಭವಾಗಿದೆ ಎಂದು ಖಾದರ್ ಹೇಳಿದರು.

Facebook Comments

Sri Raghav

Admin