ಜೆಡಿಎಸ್ ಸ್ವಂತ ಬಲದ ಮೇಲೆ ಮೈಸೂರು ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

H-vishwanath

ಮೈಸೂರು, ಆ.27- ಈ ಬಾರಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ ಎಂದು ನಿನ್ನೆ ನೀಡಿದ್ದ ಹೇಳಿಕೆಗೆ ವಿಶ್ವನಾಥ್ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಮೇಲಿನಂತೆ ಟಾಂಗ್ ನೀಡಿದ್ದಾರೆ. ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಜೆಡಿಎಸ್ ಶ್ರಮಿಸಲಿದೆ. ಹಾಗಾಗಿ ಮೈಸೂರಿನ ಮತದಾರರು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದರೂ ಸಹ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಏಕಾಂಗಿ ಹೋರಾಟ ನಡೆಸುತ್ತಿದೆ. ಹಾಗಾಗಿ ಕಾಂಗ್ರೆಸ್‍ನೊಂದಿಗೆ ಯಾವುದೇ ಒಪ್ಪಂದವಿಲ್ಲ ಎಂದರು.

ಮೈಸೂರು ಈಗ ಮಹಾನಗರ ಪಾಲಿಕೆಯಾಗಿದೆ. ಅದನ್ನು ಜೆಡಿಎಸ್ ಸರ್ಕಾರ ಬೃಹತ್ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಿದೆ. ಮೈಸೂರಿನ ಹೊರಭಾಗದ ರಿಂಗ್ ರಸ್ತೆಯಲ್ಲಿರುವ ಹಲವು ಪ್ರದೇಶಗಳನ್ನು ಮೈಸೂರು ಪಾಲಿಕೆ ವ್ಯಾಪ್ತಿಗೆ ಸೇರಿಸಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು. ಪ್ರಸ್ತುತ ಪಾಲಿಕೆಯಲ್ಲಿ 65 ವಾರ್ಡ್‍ಗಳಿದ್ದು, ಅವುಗಳನ್ನು ಇನ್ನೂ ಹೆಚ್ಚಿನ ವಾರ್ಡ್‍ಗಳಾಗಿ ವಿಂಗಡಿಸಲಾಗುವುದು. ಮೈಸೂರಿನಲ್ಲಿರುವ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡಗಳ ಅಭಿವೃದ್ಧಿಯನ್ನು ಸಹ ಜೆಡಿಎಸ್ ಸರ್ಕಾರ ಮಾಡಲಿದೆ. ಹಾಗಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

ಈ ಭಾರಿ ಅದ್ಧೂರಿ ಹಾಗೂ ಜನಸಾಮಾನ್ಯರ ದಸರಾ ನಡೆಸುವ ಬಗ್ಗೆ ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಮೈಸೂರಿನಲ್ಲಿ ನಡೆಯಲಿರುವ ಉನ್ನತ ಮಟ್ಟದ ದಸರಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ಶ್ರೀಕಂಠೇಗೌಡ, ಜೆಡಿಎಸ್ ಮುಖಂಡ ಪ್ರೊ.ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin