ಪೂಜೆ ಮಾಡಿ ಬಲಿ ಕೊಟ್ರೆ ಸಿಕ್ಕಾಪಟ್ಟೆ ಆಫರ್ಸ್ ಬರುತ್ತೆ ಎಂದು ಸಹನಟಿಗೆ 8ಲಕ್ಷ ರೂ. ಉಂಡೆನಾಮ..!

ಈ ಸುದ್ದಿಯನ್ನು ಶೇರ್ ಮಾಡಿ

Actress--011

ಬೆಂಗಳೂರು,ಆ.27- ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಚಿತ್ರರಂಗದ ಸಹ ನಿರ್ದೇಶಕನೊಬ್ಬ ನಟಿಯಿಂದ 8 ಲಕ್ಷ ರೂ.ಹಣ ಪಡೆದು ವಂಚಿಸಿರುವ ಬಗ್ಗೆ ಗಿರಿನಗರ ಠಾಣೆಯಲ್ಲಿ ದೂರು ನೀಡಲಾಗಿದೆ.ಚಿತ್ರರಂಗದಲ್ಲಿ ಒಳ್ಳೆಯ ನಟಿಯಾಗಿ ಹೆಸರು ಮಾಡಿ ಹೆಚ್ಚಿನ ಅವಕಾಶ ಸಿಗಲು ಪೂಜೆ ಮಾಡಿಸುವಂತೆ ನಂಬಿಸಿ ಸಹ ನಿರ್ದೇಶಕರಾಗಿದ್ದ ನಾಗೇಶ್ 8 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಸಹನಟಿ ಚೇತನಾ ಅವರು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚೇತನಾ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಗಿರಿನಗರ ಪೊಲೀಸರು ಆರೋಪಿ ಸಹ ನಿರ್ದೇಶಕ ನಾಗೇಶ್ ಹಾಗೂ ಗೌರಿ ಎಂಬುವರ ಪತ್ತೆಗಾಗಿ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ಈ ಸಂಜೆಗೆ ತಿಳಿಸಿದ್ದಾರೆ.

ಸಂದೇಶ್ ನಾಗರಾಜ್ ಅವರು ಚಿತ್ರವೊಂದರ ನಿರ್ಮಾಣ ಮಾಡುತ್ತಿದ್ದರು. ಕಾರಣಾಂತರಗಳಿಂದ ಅವರು ಆ ಚಿತ್ರದಿಂದ ಹೊರಬಂದಿದ್ದರು. 2013ರಲ್ಲಿ ಈ ಸಿನಿಮಾ ಸೆಟ್ಟೇರಿತ್ತು. ನಂತರ ಆರ್ಥಿಕ ಸಮಸ್ಯೆಗಳಿಂದ ಶೂಟಿಂಗ್ ಶುರುವಾಗದೇ ಆ ಚಿತ್ರ ನಿಂತು ಹೋಗಿತ್ತು. ಸಂದೇಶ್ ನಾಗರಾಜ್‍ರಿಂದ ಈ ಸಿನಿಮಾ ಖರೀದಿಸಿ ಸ್ವತಃ ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ಮಾಣಕ್ಕೆ ಮುಂದಾಗಿದ್ದರು. 2015ರಲ್ಲಿ ರವಿಚಂದ್ರನ್ ನಿರ್ಮಾಣದಲ್ಲಿ ಈ ಸಿನಿಮಾದ ಚಿತ್ರೀಕರಣ ಶುರುವಾಯಿತು. ಈ ವೇಳೆ ಹೊಸಕೋಟೆ ಮೂಲದ ನಾಗೇಶ್ ಸಿನಿಮಾಗೆ ಸಹ ನಿರ್ಮಾಪಕನಾಗಿ ಸೇರಿಕೊಂಡಿದ್ದಾರೆ.

ನಟಿ ಚೇತನಾಗೆ ಸಿನಿಮಾದಲ್ಲಿ ನಾಯಕನ ತಂಗಿಯ ಪಾತ್ರಕ್ಕೆ ನಾಗೇಶ್ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ವೇಳೆ ನಟಿ ಚೇತನಾಗೂ ಸಹ ನಿರ್ದೇಶಕ ನಾಗೇಶ್‍ಗೂ ಪರಿಚಯವಾಗಿತ್ತು. ಕೆಲ ದಿನಗಳ ನಂತರ ಮತ್ತೆ ಆ ಸಿನಿಮಾದ ಚಿತ್ರೀಕರಣ ನಿಂತುಹೋಯಿತು. ಈ ವೇಳೆ ನಾಗೇಶ್, ನಟಿ ಚೇತನಾ ನಂಬರ್‍ಗೆ ಎಸ್‍ಎಂಎಸ್ ಸಂದೇಶ ಕಳುಹಿಸಲು ಆರಂಭಿಸಿದ್ದಾನೆ.

ಮನು ಎಂಬ ಹೆಸರಿನಲ್ಲಿ ನಾಗೇಶ್, ನಟಿಗೆ ವಾಟ್ಸಾಪ್‍ನಲ್ಲಿ ಸಂದೇಶ ಕಳುಹಿಸಿ ನೀನು ಸಿನಿಮಾರಂಗದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಯಬೇಕು. ನೀನು ಒಳ್ಳೆಯ ಹೆಸರು ಮಾಡಬೇಕಾದರೆ ಗೌರಿ ಎಂಬಾಕೆಯನ್ನು ಭೇಟಿಯಾಗು ಎಂದು ಹೇಳಿದ್ದರು. ನಿನ್ನ ಹೆಸರಲ್ಲಿ ಪೂಜೆ ಮಾಡಿಸಬೇಕು. ನಿನಗೆ ದೋಷವಿದೆ. ಪೂಜೆ ಮಾಡಿ ಮಗುವನ್ನು ಬಲಿ ಕೊಡಬೇಕು ಎಂದು ಮೊಬೈಲ್‍ನಲ್ಲಿ ನಟಿ ಚೇತನಾ ಅವರಿಗೆ ಗೌರಿ ಹೇಳಿದ್ದಳು. ನಿನಗೆ ಒಳ್ಳೆ ಹೆಸರು ಒಳ್ಳೆಯ ಅವಕಾಶಗಳು ಬರಲಿದೆ ಎಂದು ನಂಬಿಸಿ ನಾಗೇಶ್ ಕಳೆದ 3 ವರ್ಷಗಳಿಂದ ನಟಿಯಿಂದ ಸುಮಾರು ಎಂಟೂವರೆ ಲಕ್ಷ ಹಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ನಾಗೇಶ್ ಕಳೆದ ಆಗಸ್ಟ್ ಒಂದರಂದು ವೀಣಾ ಬ್ಯಾಂಕ್ ಖಾತೆಗೆ ಮತ್ತೆ 50 ಸಾವಿರ ಜಮಾ ಮಾಡಿಸಿಕೊಂಡಿದ್ದಾರೆ. ನಂತರ ನಟಿಯ ಫೋನ್ ಕರೆಗೂ ಸಿಗದೇ ಸ್ವಿಚ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ. ಮೋಸ ಹೋದ ಸಹನಟಿ ಚೇತನಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಸಹ ನಿರ್ದೇಶಕ ನಾಗೇಶ್ ಹಾಗೂ ಗೌರಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Facebook Comments

Sri Raghav

Admin