ಲೋಕಲ್ ಫೈಟ್ : ಮತದಾರರನ್ನು ಸೆಳೆಯಲು ಅಭ್ಯರ್ಥಿಗಳ ನಾನಾ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

Political-Parties-BJP-Congr
ಬೆಂಗಳೂರು, ಆ.27- ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದ ಅಬ್ಬರ ತಾರಕಕ್ಕೇರಿದೆ. ಇದೇ 31ರಂದು ನಡೆಯಲಿ ರುವ ಚುನಾವಣೆ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಇದ್ದು, ವಿವಿಧ ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳು ಮತದಾರರ ಮನವೊಲಿಕೆಗೆ ನಾನಾ ಕಸರತ್ತು ನಡೆಸುತ್ತಿದ್ದಾರೆ.

ಈ ಬಾರಿ ಭಾರೀ ಬಹಿರಂಗ ಸಭೆಗಳು ಅಷ್ಟಾಗಿ ಕಂಡು ಬರದಿದ್ದರೂ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವುದು ಹೆಚ್ಚಾಗಿದೆ. ಮಡಿಕೇರಿ ಜಿಲ್ಲೆ ಹೊರತುಪಡಿಸಿ 104 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಗೆ ಆಯೋಗ ಎಲ್ಲಾ ರೀತಿಯ ಸಿದ್ಧ್ದತೆಗಳನ್ನು ಮಾಡುತ್ತಿದೆ.
ಕಣದಲ್ಲಿರುವ ಅಭ್ಯರ್ಥಿಗಳು ಕೂಡ ಪರಸ್ಪರ ಪೈಪೋಟಿಗಿಳಿದು ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ. ಜೆಡಿಎಸ್ ನಾಯಕರು ಕೂಡ ಜಿಲ್ಲಾಧ್ಯಕ್ಷರು, ಸಚಿವರು, ಶಾಸಕರಿಗೆ, ಸ್ಥಳೀಯ ಮುಖಂಡರಿಗೆ ಪ್ರಚಾರದ ಹೊಣೆಗಾರಿಕೆಯನ್ನು ನೀಡಿದ್ದು, ಅವರು ಕೂಡ ಪ್ರಚಾರದಲ್ಲಿ ಮಗ್ನರಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ ಎಲ್ಲಾ ಜಿಲ್ಲೆ, ನಗರಗಳಿಗೆ ಭೇಟಿ ನೀಡಿ ಸಭೆ, ಸಮಾರಂಭಗಳನ್ನು ನಡೆಸುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಹಲವೆಡೆ ಪ್ರವಾಸ ಕೈಗೊಂಡು ಪ್ರಚಾರ ನಡೆಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಸಚಿವರು, ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮುಖಂಡರಾದ ಕೆ.ಎಸ್.ಈಶ್ವರಪ್ಪ ಮುಂತಾದವರು ರಾಜ್ಯದ ಹಲವೆಡೆ ಪ್ರವಾಸ ನಡೆಸಿ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ.

ರಾಜಕೀಯ ಪಕ್ಷಗಳ ಮುಖಂಡರ ಆರೋಪ, ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ನೆರೆ, ಬರ, ಬೆಲೆ ಏರಿಕೆಯಿಂದ ಜನ ಜರ್ಝರಿತರಾಗಿದ್ದಾರೆ. ಈ ನಡುವೆ ಎದುರಾಗಿರುವ ಚುನಾವಣೆಗೆ ಮತ ಕೇಳಲು ಬರುತ್ತಿರುವ ಅಭ್ಯರ್ಥಿಗಳಿಗೆ ಹಲವೆಡೆ ಸಾರ್ವಜನಿಕರಿಂದ ಮಂಗಳರಾತಿಯಾಗುತ್ತಿರುವ ಉದಾಹರಣೆಗಳು ಕೇಳಿಬರುತ್ತಿವೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳಷ್ಟೇ ಪ್ರಮಾಣದಲ್ಲಿ ಪಕ್ಷೇತರ ಅಭ್ಯರ್ಥಿಗಳು ಕೂಡ ಕಣದಲ್ಲಿದ್ದು, ಅವರೂ ಕೂಡ ಪ್ರಚಾರ ಚುರುಕುಗೊಳಿಸಿದ್ದಾರೆ.

ಬಹಿರಂಗ ಪ್ರಚಾರ, ಮೈಕಾಸುರನ ಹಾವಳಿ ಅಷ್ಟಾಗಿ ಇಲ್ಲ. ಮನೆ ಮನೆಗೆ ತೆರಳಿ ಮತಯಾಚಿಸುವುದು, ಮತದಾರರನ್ನು ಓಲೈಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಪುರಸಭೆ, ಪಟ್ಟಣ ಪಂಚಾಯ್ತಿ, ನಗರಸಭೆಗಳ ಗಲ್ಲಿ ಗಲ್ಲಿಗಳಲ್ಲೂ ಚುನಾವಣೆಯದ್ದೇ ಮಾತು. ಪ್ರಚಾರದ್ದೇ ಸದ್ದು. ಒಟ್ಟಾರೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಎಷ್ಟು ಸ್ಥಾನಗಳು ತಮ್ಮದಾಗವಲಿವೆ ಎಂಬ ಲೆಕ್ಕಾಚಾರದಲ್ಲಿ ತೊಡಗಿವೆ.

ಮುಂಬರುವ ಲೋಕಸಭೆ ಚುನಾವಣೆಗೆ ಸ್ಥಳೀಯ ಚುನಾವಣೆ ದಿಕ್ಸೂಚಿಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದರೂ, ಈ ಎರಡೂ ಪಕ್ಷಗಳು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿವೆ. ಇದರ ಲಾಭ ನಮಗಾಗಬಹುದು ಎಂದು ಬಿಜೆಪಿ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದೆ. ಆ.31ರಂದು ಚುನಾವಣೆ ನಡೆಯಲಿದ್ದು, ಸೆ.3ರಂದು ಹೊರ ಬೀಳಲಿರುವ ಫಲಿತಾಂಶ ಹೊಸ ರಾಜಕೀಯ ಪಲ್ಲಟಕ್ಕೆ ಕಾರಣವಾಗುತ್ತದೆಯೋ ಇಲ್ಲವೋ ಎಂಬುದನ್ನು ಕಾದುನೋಡಬೇಕು.

Facebook Comments

Sri Raghav

Admin