ದೆಹಲಿಯಲ್ಲಿ ಬಿಜೆಪಿ ಸಿಎಂಗಳ ಮಹತ್ವದ ಸಭೆ, ಚುನಾವಣಾ ರಣತಂತ್ರ
ನವದೆಹಲಿ (ಪಿಟಿಐ), ಆ.28-ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಳು ಹಾಗೂ 2019ರ ಲೋಕಸಭೆ ಸಮರಕ್ಕಾಗಿ ಬಿಜೆಪಿ ಈಗಿನಿಂದಲೂ ಯುದ್ಧೋಪಾದಿಯ ಸಿದ್ದತೆಗಳನ್ನು ನಡೆಸುತ್ತಿದ್ದು, ಗೆಲುವಿಗಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಪಕ್ಷದ ಆಡಳಿತವಿರುವ 15 ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಚುನಾವಣಾ ಸಿದ್ದತೆಗಳು ಹಾಗೂ ರೂಪುರೇಷೆಗಳ ಬಗ್ಗೆ ಮಹತ್ವದ ಸಮಾಲೋಚನೆ ನಡೆಯಿತು.
ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಮುಂದಿನ ವರ್ಷ ಲೋಕಸಭೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆದ ಬಿಜೆಪಿ ಮುಖ್ಯಮಂತ್ರಿಗಳ ಸಭೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿವೆ. ದೆಹಲಿಯ ದೀನ್ ದಯಾಳ್ ಮಾರ್ಗದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭವಾಗಿರುವ ಸಭೆ ರಾತ್ರಿ 7ರವರೆಗೆ ನಡೆಯಲಿದೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೊರತುಪಡಿಸಿ ಬಿಜೆಪಿ ಆಡಳಿತ ಇರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ(ಉತ್ತರ ಪ್ರದೇಶ), ಶಿವರಾಜ್ ಸಿಂಗ್ ಚೌಹಾಣ್(ಮಧ್ಯಪ್ರದೇಶ), ವಸುಂಧರಾ ರಾಜೇ(ರಾಜಸ್ತಾನ), ಡಾ.ರಮಣ್ ಸಿಂಗ್(ಛತ್ತೀಸ್ಗಢ), ಪೇಮಾ ಖಂಡು(ಅರುಣಾಚಲ ಪ್ರದೇಶ), ಸರ್ಬನಂದಾ ಸೋನೊವಾಲ್(ಅಸ್ಸಾಂ), ವಿಜಯ್ ರೂಪಾನಿ(ಗುಜರಾತ್), ಜೈ ರಾಂ ಠಾಕೂರ್(ಹಿಮಾಚಲಪ್ರದೇಶ), ಮನೋಹರ್ಲಾಲ್ ಖಟ್ಟರ್(ಹರ್ಯಾಣ), ರಘುಬರ್ ದಾಸ್(ಜÁರ್ಖಂಡ್), ದೇವೇಂದ್ರ ಫಡ್ನವೀಸ್(ಮಹಾರಾಷ್ಟ್ರ), ಎನ್. ಬೀರೇಂದ್ರ ಸಿಂಗ್(ಮಣಿಪುರ), ಬಿಪ್ಲಬ್ ಕುಮಾರ್ ದೇಬ್(ತ್ರಿಪುರಾ), ಹಾಗೂ ತ್ರಿವೇಂದ್ರ ಸಿಂಗ್ ರಾವತ್(ಉತ್ತರಾಖಂಡ್) ಅವರುಗಳು ಈ ಸಭೆಯಲ್ಲಿ ಭಾಗವಹಿಸಿದ್ದಾರೆ.
15 ರಾಜ್ಯಗಳ ಮುಖ್ಯಮಂತ್ರಿಗಳಿಂದ ಮೋದಿ ಮತ್ತು ಅಮಿತ್ ಶಾ ಚುನಾವಣಾ ಪೂರ್ವಸಿದ್ಧತೆ ಕುರಿತು ಚರ್ಚಿಸಿ, ಅವರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆದರು. ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಮಹತ್ವದ ಜನಪರ ಯೋಜನೆಗಳು ಹಾಗೂ ಆಯಾ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರ ಕೈಗೊಂಡಿರುವ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮನದಟ್ಟು ಮಾಡಿಕೊಡಲು ಮೋದಿ ಮತ್ತು ಶಾ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿದರು.