ಹೆತ್ತತಾಯಿಗೆ ದಯಾಮರಣ ಕರುಣಿಸುವಂತೆ ಕೇಳಿದ ಕಟುಕ ಮಗನಿಗೆ ಬುದ್ಧಿ ಹೇಳಿದ ಡಿಸಿ..!

ಈ ಸುದ್ದಿಯನ್ನು ಶೇರ್ ಮಾಡಿ

mOTHER--01

ತುಮಕೂರು, ಆ.28- ನೂರು ದೇವರನ್ನು ಪೂಜಿಸುವ ಬದಲು ಹೆತ್ತ ತಾಯಿಯನ್ನು ಗೌರವಿಸು ಎನ್ನುವ ಗಾದೆ ಮಾತಿದೆ. ಆದರೆ, ಅನಾರೋಗ್ಯದಿಂದ ನರಳುತ್ತಿರುವ ತಾಯಿಯನ್ನು ಸಲಹಲು ಸಾಧ್ಯವಾಗುತ್ತಿಲ್ಲ. ಆಕೆಗೆ ದಯಾಮರಣ ಕರುಣಿಸಿ ಎಂದು ಡಿಸಿ ಕಚೇರಿಗೆ ಹೆತ್ತತಾಯಿಯನ್ನು ಕರೆತಂದ ಕಟುಕ ಮಗನೊಬ್ಬನಿಗೆ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಬುದ್ಧಿವಾದ ಹೇಳಿ ಕಳುಹಿಸುವ ಮೂಲಕ ಮಾನವೀಯತೆಗೆ ಮುನ್ನುಡಿ ಬರೆದಿದ್ದಾರೆ.

ಶಾಂತಿನಗರದ ನಿವಾಸಿ ರಮೇಶ್ ಕೂಲಿ ಕೆಲಸ ಮಾಡುತ್ತಿದ್ದರೂ ಜೀವನಕ್ಕೇನೂ ತೊಂದರೆ ಇಲ್ಲ. ಸ್ವಂತ ಮನೆ ಇದೆ. ಮಡದಿ-ಮಕ್ಕಳೂ ಇದ್ದಾರೆ. ಆದರೆ, ಆತನ ತಾಯಿ ನಾಗರತ್ನಮ್ಮನಿಗೆ ಬ್ಲಡ್ ಕ್ಯಾನ್ಸರ್.  ಎಷ್ಟು ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗದೆ ನಾಗರತ್ನಮ್ಮ ರಾತ್ರಿ ವೇಳೆ ಕಿರುಚಿಕೊಳ್ಳುತ್ತಿದ್ದರು. ಹಾಸಿಗೆಯಲ್ಲೇ ಮಲಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದರು. ತನಗೆ ಜೀವ ನೀಡಿದ ಹೆತ್ತ ತಾಯಿಯ ಸೇವೆ ಮಾಡಿ ತನ್ನ ಋಣ ತೀರಿಸಿಕೊಳ್ಳಬೇಕಾದ ರಮೇಶ ಆಕೆಯಿಂದ ಮುಕ್ತಿ ಪಡೆಯುವ ಮಾರ್ಗ ಹುಡುಕುತ್ತಿದ್ದ.

ಅದ್ಯಾವ ಪುಣ್ಯಾತ್ಮ ಅದೇನು ಹೇಳಿಕೊಟ್ಟನೋ ದೇವರೇ ಬಲ್ಲ, ಇದ್ದಕ್ಕಿದ್ದಂತೆ ರಮೇಶ ತನ್ನ ತಾಯಿ ನಾಗರತ್ನಮ್ಮರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಬಂದು ಅನಾರೋಗ್ಯದಿಂದ ಬಳಲುತ್ತಿರುವ ನನ್ನ ತಾಯಿಯನ್ನು ಸಲಹಲು ಸಾಧ್ಯವಾಗುತ್ತಿಲ್ಲ. ಆಕೆಗೆ ದಯಾಮರಣ ಕರುಣಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಅಂಗಲಾಚತೊಡಗಿದ. ಅನಾರೋಗ್ಯಕ್ಕೆ ಒಳಗಾಗಿರುವ ತನ್ನ ತಾಯಿ ರಾತ್ರಿ ವೇಳೆ ಕಿರುಚಾಡುವುದು, ಕುಳಿತಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ನನಗೆ ಜೀವನ ಬೇಸತ್ತು ಹೋಗಿದೆ. ಆಕೆಗೆ ದಯಾಮರಣ ಕೊಡುವಂತೆ ಪರಿಪರಿಯಾಗಿ ಬೇಡಿಕೊಳ್ಳತೊಡಗಿದ. ಕಟುಕ ಮಗನೊಬ್ಬನಿಗೆ ತನ್ನ ತಾಯಿ ಬೇಡವಾಗಿದ್ದಾಳೆ ಎಂಬ ಸಂಗತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಅವರು ಮಗನಿಗೆ ಬೇಡವಾದ ವೃದ್ಧೆಯನ್ನು ಮುಟ್ಟಿ ಮಾತನಾಡಿಸುವ ಮೂಲಕ ಮಾನವೀಯತೆ ಮೆರೆದರು.

ಮಾತ್ರವಲ್ಲ, ಹೆತ್ತ ತಾಯಿಗೆ ದಯಾಮರಣ ಕರುಣಿಸಿ ಎಂದು ಅಂಗಲಾಚಿಕೊಳ್ಳುತ್ತಿದ್ದ ಕಟುಕ ಮಗನನ್ನು ತರಾಟೆಗೆ ತೆಗೆದುಕೊಂಡ ರಾಕೇಶ್‍ಕುಮಾರ್ ಅವರು ನೀನು ಮನುಷ್ಯನೊ, ರಾಕ್ಷಸನೊ… ಒಂದು ವೇಳೆ ನಿನ್ನ ತಾಯಿಗೆ ಬಂದ ಸ್ಥಿತಿ ನಿನಗೇ ಬಂದಿದ್ದರೆ ಏನು ಮಾಡುತ್ತಿ ದ್ದೆ .  ನಿನಗೆ ಮಾರಣಾಂತಿಕ ಕಾಯಿಲೆ ಬಂದು ಮಲಗಿದ್ದಲ್ಲೇ ಮಲಮೂತ್ರ ವಿಸರ್ಜನೆ ಮಾಡಿಕೊಂಡಿದ್ದರೆ ನಿನ್ನ ತಾಯಿ ನಿನ್ನನ್ನು ಬೀದಿಗೆ ಬಿಡುತ್ತಿದ್ದಳೇ..? ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು. ತಮ್ಮ ಮಕ್ಕಳು ಏನೇ ಮಾಡಿದರೂ ಅವರನ್ನು ಸಾಕಿ ಸಲಹುವುದೇ ತಾಯಿಧರ್ಮ ಎಂಬ ಭಾವನೆ ಹೊಂದಿರುತ್ತಾರೆ.

ಅಂತಹ ಮಹಾತಾಯಿ ಅನಾರೋಗ್ಯಕ್ಕೀಡಾದಾಗ ಮಕ್ಕಳಾದವರು ಆಕೆಯ ಸೇವೆ ಮಾಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆ ಹೊರತು ಸಲಹಲು ಸಾಧ್ಯವಿಲ್ಲ ಎಂದು ಬೀದಿಗೆ ಬಿಡಬಾರದು ಎಂದು ಬುದ್ಧಿವಾದ ಹೇಳಿದರು. ರಮೇಶನಿಗೆ ಡಿಸಿ ಬುದ್ಧಿವಾದ ಹೇಳುತ್ತಿದ್ದರೆ, ಮಗನಿಗೆ ಬೇಡವಾದ ಆ ತಾಯಿಯ ಕಣ್ಣಲ್ಲಿ ನೀರು ಗಳಗಳನೆ ಹರಿಯುತ್ತಿದ್ದ ದೃಶ್ಯ ಎಂಥವರ ಕಲ್ಲು ಮನಸ್ಸನ್ನೂ ಕರಗಿಸುವಂತಿತ್ತು.

ಆ ಹೆತ್ತ ತಾಯಿಯ ಕಣ್ಣೀರನ್ನು ಕಂಡ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಅವರ ಕಣ್ಣಾಲಿಗಳಲ್ಲೂ ನೀರು ಕಾಣಿಸಿಕೊಂಡಿತು. ಕೂಡಲೇ ಅಧಿಕಾರಿಗಳನ್ನು ಕರೆದು ನೆಲದ ಮೇಲೆ ಮಲಗಿಸಿದ್ದ ವೃದ್ಧೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದೇ ಅಲ್ಲದೆ ನಿಮ್ಮ ಮನೆಯಲ್ಲಿ ಯಾರಿಗಾದರೂ ಇಂತಹ ಪರಿಸ್ಥಿತಿ ಬಂದಿದ್ದರೆ ಸುಮ್ಮನಿರುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಕೂಡಲೇ ಆ್ಯಂಬುಲೆನ್ಸ್ ಕರೆಸಿ ವೃದ್ಧೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆಕೆಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಜಿಲ್ಲಾಸ್ಪತ್ರೆಯ ಸರ್ಜನ್ ಅವರೊಂದಿಗೂ ಮಾತುಕತೆ ನಡೆಸಿದರು. ಮಾತ್ರವಲ್ಲ, ವೈದ್ಯಕೀಯ ಸಿಬ್ಬಂದಿಗಳನ್ನು ಕರೆಸಿ ನಾಗರತ್ನಮ್ಮ ಅವರನ್ನು ಚೆನ್ನಾಗಿ ನೋಡಿಕೊಳ್ಳುವಂತೆಯೂ ಖಡಕ್ ಎಚ್ಚರಿಕೆ ನೀಡಿದರು. ಹೆತ್ತ ಮಗನಿಗೆ ಬೇಡವಾದ ತಾಯಿಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುವ ಮೂಲಕ ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಹೃದಯ ವೈಶಾಲ್ಯತೆ ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.

Facebook Comments

Sri Raghav

Admin