ಕೊಡಗಿನಲ್ಲಿ ಅಧಿಕಾರಿಗಳಿಗೆ ತಲೆನೋವಾದ ನಕಲಿ ನಿರಾಶ್ರಿತರು..!

ಈ ಸುದ್ದಿಯನ್ನು ಶೇರ್ ಮಾಡಿ

Kodaku
ಕೊಡಗು, ಆ.28-ಸುಳ್ಳು ಹೇಳಿಕೊಂಡು ನಿರಾಶ್ರಿತರ ಕೇಂದ್ರಗಳಲ್ಲಿ ಸೇರಿರುವವರನ್ನು ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ಹರಸಾಹಸವಾಗಿದೆ.  ಕೊಡಗಿನಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಭೂಕುಸಿತದ ಪರಿಣಾಮ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.  ಮನೆ-ಮಠ ಕಳೆದುಕೊಂಡು ನಿವರ್ಸತಿಗರಿಗೆ ಸರ್ಕಾರ 41 ಕಾಳಜಿ ಕೇಂದ್ರಗಳನ್ನು ನಿರ್ಮಿಸಿ ತಾತ್ಕಾಲಿಕ ಆಶ್ರಯ ಕಲ್ಪಿಸಿತ್ತು.

ಇಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯಪಡೆದಿದ್ದರು. ಮನೆ, ಮಠ ಕೊಚ್ಚಿ ಹೋಯಿತು. ಹಸುಗೂಸು, ಮಕ್ಕಳು ನೀರು ಪಾಲಾದವು, ಜನ-ಜಾನುವಾರುಗಳು ಸತ್ತು ಹೋದವು, ಬಹಳಷ್ಟು ಜನ ಕಣ್ಮರೆಯಾಗಿದ್ದಾರೆ ಎಂದು ಹೇಳುವವರು ಜಾಸ್ತಿಯಾಗಿದ್ದಾರೆ. ಆದರೆ ಅಧಿಕಾರಿಗಳು ಪರಿಹಾರ ನೀಡಬೇಕಾದ ಹಿನ್ನೆಲೆಯಲ್ಲಿ ಇವುಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲು ಹೋದಾಗ ಕಂಡುಬಂದ ದೃಶ್ಯವೇ ಬೇರೆಯದ್ದಾಗಿದೆ.  ನೈಜ ಫಲಾನುಭವಿಗಳಲ್ಲದೆ, ಬಹಳಷ್ಟು ಜನ ಸರ್ಕಾರದ ಪರಿಹಾರದ ಹಣಕ್ಕಾಗಿ ಹಲವು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂಬ ಅಂಶವೂ ಕೇಳಿ ಬಂದಿದೆ. ಅಲ್ಲದೆ, ಅಪಾರ ಪ್ರಮಾಣದಲ್ಲಿ ಹರಿದುಬಂದಿರುವ ಪರಿಹಾರ ಸಾಮಗ್ರಿಗಳು ಕೂಡ ದುರುಪಯೋಗವಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಮಳೆ ದುರಂತದಲ್ಲಿ ಮುಕ್ಕೋಡ್ಲುವಿನ ಹಲವಾರು ಮನೆಗಳು ಕೊಚ್ಚಿ ಹೋದವು. ಇಲ್ಲಿ ವಾಸವಿದ್ದ ದಂಪತಿಯೊಬ್ಬರು ನಿರಾಶ್ರಿತರ ಶಿಬಿರಕ್ಕೆ ಬಂದು ಸೇರಿ ನಮ್ಮ ಮನೆ ಕೊಚ್ಚಿ ಹೋಯಿತು, ನಮ್ಮ ಮಗನೂ ಕೂಡ ನೀರಿನಲ್ಲಿ ಕೊಚ್ಚಿ ಹೋದ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಈ ಘಟನೆ ನಡೆದಿಲ್ಲ. ಕೂಡಲೇ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಇದೇ ರೀತಿ ಹಲವು ಘಟನೆಗಳು ನಡೆದಿರ ಬಹುದಾದ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮಳೆಯಿಂದ ಅನಾಹುತಕ್ಕೀಡಾಗಿ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರು ಈಗ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾರೆ. ಸಂಪೂರ್ಣ ಹಾನಿಗೀಡಾಗಿರುವ ಮನೆಗಳವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಲು ಸರ್ಕಾರ ಮುಂದಾಗಿದೆ. ಸಾವು- ನೋವುಗಳಿಗೆ ಪರಿಹಾರ ಒದಗಿಸಲು ಮಾಹಿತಿ ಕಲೆ ಹಾಕುತ್ತಿದೆ. ಈ ನಡುವೆ ಹಲವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಮೂಲ ಕೊಡಗಿನವರು ಈ ರೀತಿ ಮಾಡಲು ಸಾಧ್ಯವಿಲ್ಲ. ಹೊರಗಿನಿಂದ ಬಂದು ನೆಲೆಸಿರುವವರು, ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು ಸುಳ್ಳು ಮಾಹಿತಿ ನೀಡಿ ನೈಜ ಸಂತ್ರಸ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

Facebook Comments