ಸ್ಮಾರ್ಟ್‍ಫೋನ್‍ ನಿಮ್ಮ ಹತ್ತಿರದಲ್ಲಿದ್ದಷ್ಟೂ ನೀವು ಪೆದ್ದರಾಗುತ್ತೀರಾ..!!

ಈ ಸುದ್ದಿಯನ್ನು ಶೇರ್ ಮಾಡಿ

Smart-Phone--01
ಇದು ಸೂಪರ್ ಜೆಟ್ ವೇಗದ ಯುಗ. ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಮಾನವ ಬಹುವೇಗವಾಗಿ ಮುಂದುವರಿಯುತ್ತಿದ್ದಾನೆ. ಹೈಟೆಕ್ ಸಾಧನಗಳೂ ಸಹ ಇದಕ್ಕೆ ಗಮನಾರ್ಹ ಕೊಡುಗೆ ನೀಡಿವೆ. ಇಂದಿನ ಸೂಪರ್‍ಫಾಸ್ಟ್ ಸನ್ನಿವೇಶದಲ್ಲಿ ಸ್ಮಾರ್ಟ್ ಫೋನ್ ಇಲ್ಲದ ಬದುಕನ್ನು ಊಹಿಸಿಕೊಳ್ಳುವುದೂ ಕಷ್ಟ. ಪ್ರತಿಯೊಬ್ಬರಿಗೂ ಮೊಬೈಲ್ ಫೋನ್ ಬೇಕೇ ಬೇಕು. ಸಂವಹನ, ದೇಶದ ಆಗುಹೋಗುಗಳ ಸುದ್ದಿ-ಸಂಗತಿಗಳು, ಯಾವುದೇ ವಿಷಯಗಳ ಮಾಹಿತಿಗೆ ಬಹುತೇಕ ಮಂದಿ ಸ್ಮಾರ್ಟ್ ಫೋನ್‍ಗಳನ್ನು ಅವಲಂಬಿಸಿರುತ್ತಾರೆ. ಯಾವುದೇ ಸಾಧನ-ಉಪಕರಣಗಳಲ್ಲಿ ಅನುಕೂಲ ಅನಾನುಕೂಲಗಳು ಇದ್ದೇ ಇರುತ್ತವೆ. ಇದಕ್ಕೆ ಸ್ಮಾರ್ಟ್ ಫೋನ್‍ಗಳೂ ಕೂಡ ಹೊರತಾಗಿಲ್ಲ. ಇವುಗಳು ನಿಮಗೆ ಅನಿವಾರ್ಯವಾದರೂ, ಇವು ನಿಮಗೆ ಹತ್ತಿರದಲ್ಲಿದ್ದಷ್ಟೂ ನಿಮ್ಮ ಸ್ವಾಭಾವಿಕ ಅರಿವು ಮತ್ತು ಜ್ಞಾನದ ಕೊರತೆಯನ್ನು ಕುಂಠಿತಗೊಳಿಸುತ್ತವೆ ಎಂಬುದು ಹೊಸ ಪ್ರಾಯೋಗಿಕ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಸ್ಮಾರ್ಟ್ ಫೋನ್‍ಗಳು ನಮ್ಮ ಬಳಿ ಇದ್ದರೆ ನಮ್ಮ ಸಹಜ ಸಾಮಥ್ರ್ಯವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಅಮೆರಿಕದ ನ್ಯೂಯಾರ್ಕ್‍ನಲ್ಲಿ ನಡೆದ ಸಂಶೋಧನೆಯೊಂದು ಸಾಬೀತು ಮಾಡಿದೆ.  ಖ್ಯಾತ ಸಾಫ್ಟ್ ವೇರ್ ತಂತ್ರಜ್ಞ ಹಾಗೂ ಜ್ಞಾನಾಧಾರಿತ ಜಾಣ್ಮೆಗಳ ಲೇಖಕ ಅಡ್ರಿಯನ್ ವಾರ್ಡ್ ಮತ್ತು ಅವರ ಸಹಾಯಕರು ಇದಕ್ಕಾಗಿ ಪ್ರಯೋಗಗಳನ್ನು ನಡೆಸಿದ್ದಾರೆ. 800ಕ್ಕೂ ಹೆಚ್ಚು ಮೊಬೈಲ್ ಫೋನ್‍ಗಳ ಬಳಕೆದಾರರನ್ನು ಸಹ ಈ ಪರೀಕ್ಷೆಗೆ ಒಳಪಡಿಸಿದ್ದಾರೆ. ಮೊಬೈಲ್‍ನನ್ನು ತೀರಾ ಸನಿಹದಲ್ಲಿ ಇಟ್ಟುಕೊಂಡವರು, ಅದರಿಂದ ಸ್ವಲ್ಪ ದೂರ ಇರುವವರು ಹಾಗೂ ಬ್ಯಾಗ್‍ಗಳಲ್ಲಿ ಅವುಗಳನ್ನು ಇಟ್ಟುಕೊಂಡ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

Smar-Phone--01

ಈ ಅಧ್ಯಯನ ನಡೆಸಲು ಮೊಬೈಲ್ ಬಳಕೆದಾರರನ್ನು ಒಂದು ಪರೀಕ್ಷೆಗೆ ಒಳಪಡಿಸಲಾಯಿತು. ಕಂಪ್ಯೂಟರ್‍ಗಳ ಮುಂದೆ ಅವರನ್ನು ಕೂರಿಸಿ ಅವರ ಅರಿವು ಮತ್ತು ಜ್ಞಾನವನ್ನು ಸಂಪೂರ್ಣ ಏಕಾಗ್ರತೆ ಮೂಲಕ ಪರೀಕ್ಷಿಸಲಾಯಿತು. ಲಭ್ಯವಿರುವ ಅವರ ಅರಿವು ಸಾಮಥ್ರ್ಯ ಮಾಪನ ಮಾಡಲು ಟೆಸ್ಟ್‍ಗಳನ್ನು ನೀಡಲಾಯಿತು. ನೀಡಲಾದ ನಿಗದಿತ ಸಮಯದಲ್ಲಿ ವಿಷಯವನ್ನು ಗ್ರಹಿಸುವ ಹಾಗೂ ದತ್ತಾಂಶವನ್ನು ಸಂಸ್ಕರಣೆ ಮಾಡುವಲ್ಲಿ ಮೆದುಳಿನ ಸಾಮಥ್ರ್ಯವನ್ನು ಅರಿಯುವುದು ಇದರ ಉದ್ದೇಶವಾಗಿತ್ತು. ಪರೀಕ್ಷೆಗೆ ಒಳಪಡಿಸುವುದಕ್ಕೂ ಮುನ್ನ ಸ್ಮಾರ್ಟ್ ಫೋನ್ ಬಳಕೆದಾರರಿಗೆ ತಮ್ಮ ಮೊಬೈಲ್‍ಗಳನ್ನು ಡೆಸ್ಕ್‍ಗಳ ಮೇಲೆ, ತಮ್ಮ ಜೇಬು ಅಥವಾ ಬ್ಯಾಗ್‍ಗಳಲ್ಲಿ ಅಥವಾ ಮತ್ತೊಂದು ಕೊಠಡಿಗಳಲ್ಲಿ ಇಡುವಂತೆ ಸೂಚಿಸಲಾಗಿತ್ತು. ಮೊಬೈಲ್‍ಗಳನ್ನು ಸೈಲೆಂಟ್ ಮೋಡ್‍ಗೆ ಇಡುವಂತೆ ಸೂಚಿಸಲಾಗಿತ್ತು.

ಆನಂತರ ನಡೆದ ಪರೀಕ್ಷೆಗಳಿಂದ ಸಂಶೋಧಕರಿಗೆ ಲಭ್ಯವಾದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಮತ್ತೊಂದು ಕೊಠಡಿಯಲ್ಲಿ ತಮ್ಮ ಸ್ಮಾರ್ಟ್ ಫೋನ್‍ಗಳನ್ನು ಇಟ್ಟಿದ್ದ ಮಂದಿ, ಡೆಸ್ಕ್ ಮೇಲೆ ಫೋನ್‍ಗಳನ್ನು ಇಟ್ಟಿದ್ದ ಜನರಿಗಿಂತ ಉತ್ತಮ ಸ್ಕೋರ್‍ಗಳನ್ನು ಗಳಿಸಿದ್ದರು. ಅವರು ತಮ್ಮ ಸಹಜ ಅರಿವು ಮತ್ತು ಜ್ಞಾನವನ್ನು ಪರೀಕ್ಷೆಗಳಲ್ಲಿ ಬಳಸಿದ್ದರು. ಅದೇ ಬ್ಯಾಗ್‍ಗಳಲ್ಲಿ ತಮ್ಮ ಮೊಬೈಲ್ ಫೋನ್‍ಗಳನ್ನು ಇಟ್ಟಿದ್ದವರು ಕೂಡ ಡೆಸ್ಕ್ ಮೇಲೆ ಮೊಬೈಲ್ ಇರಿಸಿದ್ದವರಿಗಿಂತ ಸ್ವಲ್ಪ ಹೆಚ್ಚು ಸ್ಕೋರ್‍ಗಳನ್ನು ಗಳಿಸಿದ್ದರು.  ಸ್ಮಾರ್ಟ್ ಫೋನ್‍ಗಳು ಹತ್ತಿರದಲ್ಲಿದ್ದಷ್ಟೂ ನಮ್ಮ ಸ್ವಾಭಾವಿಕ ಅರಿವಿನ ಮತ್ತು ಜ್ಞಾನದ ಕೊರತೆ ಕಡಿಮೆಯಾಗುತ್ತದೆ ಎಂಬುದು ಈ ಪ್ರಯೋಗದಿಂದ ಸಾಬೀತಾಗಿದೆ.

ಮೊಬೈಲ್ ತೀರಾ ಸನಿಹದಲ್ಲಿದ್ದರೆ ನಮ್ಮಲ್ಲಿ ಲಭ್ಯವಿರುವ ಅರಿವು ಸಾಮಥ್ರ್ಯ ಕಡಿಮೆಯಾಗುತ್ತದೆ. ಹಾಗೂ ಜ್ಞಾನದ ಕಾರ್ಯನಿರ್ವಹಣೆಗೂ ಅಡ್ಡಿಯಾಗುತ್ತದೆ. ಮೊಬೈಲ್ ಹತ್ತಿರದಲ್ಲಿದ್ದರೆ ಏಕಾಗ್ರತೆಗೆ ಭಂಗ ಉಂಟಾಗುತ್ತದೆ ಎಂಬುದನ್ನು ಈ ಪ್ರಯೋಗ ತಿಳಿಸಿದೆ. ಯೂನಿವರ್ಸಿಟಿ ಆಫ್ ಟೆಕ್ಸಾಸ್‍ನ ಮ್ಯಾಕ್‍ಕೂಂಬ್ಸ್ ಆಫ್ ಬ್ಯುಸಿನೆಸ್ ವಿಭಾಗದ ಸಹಾಯಕ ಪ್ರೊಫೆಸರ್ ಅಡ್ರಿಯನ್ ವಾರ್ಡ್, ಪಿ.ಎಚ್‍ಡಿ ಅವರು ಹೇಳುವಂತೆ ಸ್ಮಾರ್ಟ್ ಫೋನ್ ನಿಮ್ಮ ಹತ್ತಿರ ಇದ್ದರೆ (ಅದು ಸ್ವಿಚ್ ಆಫ್ ಆಗಿದ್ದರೂ ಕೂಡ) ನಿಮ್ಮ ಸ್ವಾಭಾವಿಕ ಅರಿವು ಮತ್ತು ಜ್ಞಾನದ ಸಾಮಥ್ರ್ಯವನ್ನು ಅಪಹರಿಸುತ್ತದೆ. ನಾವು ನಡೆಸಿದ ಎರಡು ಪ್ರಯೋಗಗಳಿಂದಲೂ ಇದು ಸಾಬೀತಾಗಿದೆ ಎಂದು ಯೂನಿವರ್ಸಿಟಿ ಆಫ್ ಟೆಕ್ಸಾಸ್‍ನ ಮ್ಯಾಕ್‍ಕೂಂಬ್ಸ್ ಆಫ್ ಬ್ಯುಸಿನೆಸ್ ವಿಭಾಗದ ಸಹಾಯಕ ಪ್ರೊಫೆಸರ್ ಅಡ್ರಿಯನ್ ವಾರ್ಡ್, ಪಿ.ಎಚ್‍ಡಿ ಹೇಳುತ್ತಾರೆ. ಸ್ಮಾರ್ಟ್ ಫೋನ್‍ಗಳು ಹೆಚ್ಚಾಗಿ ಕಂಡುಬರುತ್ತಿರುವುದರಿಂದ, ಅವುಗಳ ಬಳಕೆದಾರರಲ್ಲಿ ಲಭ್ಯವಿರುವ ಅರಿವು ಸಾಮಥ್ರ್ಯವನ್ನು ನಾವು ರೇಖಿಯ ಪ್ರವೃತ್ತಿ(ಲೀನಿಯರ್ ಟ್ರೆಂಡ್) ಮೂಲಕ ಗಮನಿಸಿದ್ದೇವೆ. ನಿಮ್ಮ ಪ್ರಜ್ಞಾಪೂರ್ವಕ ಮನಸ್ಸು ನಿಮ್ಮ ಸ್ಮಾರ್ಟ್ ಫೋನ್ ಬಗ್ಗೆ ಚಿಂತಿಸುವುದಿಲ್ಲವಾದರೂ, ಅದು ಹತ್ತಿರದಲ್ಲಿರಬೇಕೆಂಬ ಬಲವಂತದ ಪ್ರಕ್ರಿಯೆಯಿಂದ ಏಕಾಗ್ರತೆಗೆ ಭಂಗ ಬರುತ್ತದೆ. ಇದು ನಿಮ್ಮಲ್ಲಿನ ಅರಿವು ಮೂಲಗಳನ್ನು ಬಳಸಿಕೊಳ್ಳುವ ಸಾಮಥ್ರ್ಯ ಕ್ಷೀಣಿಸುವಂತೆ ಮಾಡುತ್ತದೆ ಎಂದು ಅವರು ಕಾರಣ ನೀಡಿದ್ದಾರೆ.

Smart-Phone--02

ಮತ್ತೊಂದು ಪ್ರಯೋಗದಲ್ಲಿ ಒಬ್ಬ ವ್ಯಕ್ತಿಯು ಯಾವ ರೀತಿ ಸ್ಮಾರ್ಟ್ ಫೋನ್ ಮೇಲೆ ಅವಲಂಬಿತನಾಗುತ್ತಾರೆ ಎಂಬುದನ್ನು ಸಂಶೋಧಕರು ತೋರಿಸಿದ್ದಾರೆ. ಆತ ಅಥವಾ ಆಕೆ ತನಗೆ ಅರಿವಿಲ್ಲದೇ ಅನಗತ್ಯ ಸಂದರ್ಭಗಳಲ್ಲೂ ಮೊಬೈಲ್ ಫೋನ್ ತನ್ನೊಂದಿಗೆ ಇರಬೇಕೆಂದು ಬಯಸುತ್ತಾರೆ. ಸ್ಮಾರ್ಟ್ ಫೋನ್ ಮೇಲೆ ವಿಪರೀತ ಅವಲಂಬನೆ ಕೂಡ ಅರಿವಿನ ಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ.  ತಮ್ಮೊಂದಿಗೆ ಸ್ಮಾರ್ಟ್ ಫೋನ್‍ಗಳನ್ನು ಹೊಂದಿರದ ವ್ಯಕ್ತಿಗಳು (ಸಣ್ಣ ಸಣ್ಣ ಮಾಹಿತಿ ಪಡೆಯಲೂ ಅವುಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗುವ ಮಂದಿ) ಈ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ ಕಳಪೆ ಸಾಮಥ್ರ್ಯ ತೋರಿದ್ದಾರೆ. ಸ್ಮಾರ್ಟ್ ಫೋನ್‍ಗಳ ಮೇಲೆ ಅಷ್ಟಾಗಿ ಅವಲಂಬಿತರಾಗದವರು ಉತ್ತಮ ಅಂಕಗಳನ್ನು ಗಳಿಸಿದ್ಧಾರೆ ಎಂಬುದು ಮೇಲಿನ ಪರೀಕ್ಷೆಗಳಿಂದ ಸಾಬೀತಾಗಿದೆ.

ಸಣ್ಣಪುಟ್ಟ ಲೆಕ್ಕಗಳನ್ನು ಮಾಡಲು, ತಮಗೆ ಗೊತ್ತಿರುವ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಸ್ಮಾರ್ಟ್ ಫೋನ್‍ಗಳ ಮೇಲೆ ಅವಲಂಬಿಸುವುದರಿಂದ ಅವರ ಸೋಮಾರಿಯಾಗುತ್ತಾರೆ. ಜೊತೆಗೆ ಮೆದುಳಿಗೆ ಕೆಲಸ ಕೊಡುವ ಅಗತ್ಯವೂ ಕಡಿಮೆಯಾಗಿ ಅದು ಸಹಜವಾಗಿ ಅರಿವು ಮತ್ತು ಜ್ಞಾನದ ಕೊರತೆಗೆ ಎಡೆ ಮಾಡಿಕೊಡುತ್ತದೆ ಎಂದು ವಿಶ್ಲೇಷಿಸಲಾಗಿದೆ. ಇನ್ನೊಂದು ಸಂಗತಿ ಎಂದರೆ ಬಹುತೇಕ ಮಂದಿ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರೂ, ಅವು ತಮ್ಮ ಬಳಿ ಅಥವಾ ಪಕ್ಕದಲ್ಲೇ ಇರಬೇಕೆಂದು ಬಯಸುತ್ತಾರೆ. ಇದೊಂದು ರೀತಿ ಮೊಬೈಲ್ ಕ್ರೇಜ್.  ಇದು ಕೂಡ ಈ ಮೇಲಿನ ಸಮಸ್ಯೆಗೆ ಕಾರಣ ಎಂದು ಸಂಶೋಧಕರು ವಿವರಿಸಿದ್ದಾರೆ. ಇನ್ನು ಸ್ಮಾರ್ಟ್ ಫೋನ್‍ಗಳಲ್ಲಿನ ಇಂಟೆರ್ ನೆಟ್ ಸೇವೆಗಳ ಮೂಲಕ ಜಗತ್ತಿನ ಎಲ್ಲ ಸಂಗತಿ-ವಿದ್ಯಮಾನಗಳನ್ನು ಬೆರಳತುದಿಯಲ್ಲಿ ಪಡೆಯಲು ಸಾಧ್ಯ. ಹೀಗಿರುವಾಗ ಮನುಷ್ಯರ ಮೆದುಳಿನ ಕಸರತ್ತು ಕಡಿಮೆಯಾಗಿದೆ. ಇದು ದೇಹಾಲಸ್ಯದೊಂದಿಗೆ ಮಾನಸಿಕ ಜಡತ್ವಕ್ಕೂ ಕಾರಣವಾಗುತ್ತದೆ. ದೊಡ್ಡವರಿಗಿಂತ (ಮೊಬೈಲ್ ಬಳಸುವವರು) ಶಾಲಾ ವಿದ್ಯಾರ್ಥಿಗಳು(ಮೊಬೈಲ್ ಬಳಸದವರು) ಕೆಲವೊಂದು ವಿಷಯಗಳಲ್ಲಿ ಅತ್ಯಂತ ಚುರುಕಾಗಿರುತ್ತಾರೆ. ಏಕೆಂದರೆ ಅವರ ಮೆದುಳು ಕ್ರಿಯಾಶೀಲವಾಗಿರುತ್ತದೆ. ಯಾವುದೇ ವಿಷಯಗಳಿಗೆ ಸ್ಮಾರ್ಟ್ ಫೋನ್‍ಗಳನ್ನು ಅವಲಂಬಿಸದೇ ಅವುಗಳನ್ನು ಪ್ರಾಯೋಗಿಕವಾಗಿ ಮಾಡುತ್ತಾರೆ ಎಂದು ಸಂಶೋಧಕರು ಉದಾಹರಣೆಯೊಂದನ್ನು ನೀಡಿದ್ದಾರೆ.

ಸ್ಮಾರ್ಟ್ ಫೋನ್‍ಗಳು ಅಗಾಧ ಸಾಮಥ್ರ್ಯದೊಂದಿಗೆ ಮನುಜರಿಗೆ ಬಹು ಉಪಯೋಗಿ ಎಂಬುದಲ್ಲಿ ಎರಡು ಮಾತಿಲ್ಲ. ಆದರೆ ಅವುಗಳನ್ನು ಮಿತಿಮೀರಿ ಬಳಸುತ್ತಿರುವುದರಿಂದ ಅನಾನುಕೂಲಗಳೂ ಆಗುತ್ತವೆ. ಅನಗತ್ಯ ಸಂದರ್ಭಗಳಲ್ಲಿ ಇವುಗಳನ್ನು ಬಳಸದೇ ಇರುವುದರಿಂದ ಮಾನವರಲ್ಲಿನ ಅರಿವು ಮತ್ತು ಜ್ಞಾನದ ಸಾಮಥ್ರ್ಯವನ್ನು ಹೆಚ್ಚಿಸಬಹುದಾಗಿದೆ ಎನ್ನುತ್ತಾರೆ ಸಂಶೋಧಕರು.

Facebook Comments

Sri Raghav

Admin