ಪಂಚಾಯಿತಿ ಮಂಡಳಿ ರಚನೆ ವಿವಾದದಲ್ಲಿ ಟಿಎಂಸಿ-ಸಿಪಿಎಂ ಘರ್ಷಣೆಗೆ 3 ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

3-Killed--01

ಬರಾಸತ್(ಪ.ಬಂ.), ಆ.29-ಪಂಚಾಯಿತಿಯೊಂದರ ಮಂಡಳಿ ರಚನೆ ಸಂಬಂಧ ಭುಗಿಲೆದ್ದ ಭೀಕರ ಗುಂಪು ಘರ್ಷಣೆಯಲ್ಲಿ ಮೂವರು ಮೃತಪಟ್ಟು, ಇತರ 10 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ನಾತ್ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಮವಾರದಿಂದ ನಡೆಯುತ್ತಿರುವ ಇಂಥ ಗಲಭೆಗಳಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ.

ನಿನ್ನೆ ರಾತ್ರಿ ಆಮ್‍ಡಂಗಾ ಬ್ಲಾಕ್‍ನಲ್ಲಿ ಎರಡು ಗುಂಪುಗಳು ಪರಸ್ಪರ ಬಾಂಬ್‍ಗಳನ್ನು ಎಸೆದು ಗುಂಡಿನ ದಾಳಿ ನಡೆಸಿದವು. ಈ ಘರ್ಷಣೆಯಲ್ಲಿ ಮೂವರು ಹತರಾಗಿದ್ದಾರೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ 10ಕ್ಕೂ ಹೆಚ್ಚು ಜನರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದು, ಅಹಿತಕರ ಘಟನೆ ಮರುಕಳಿಸದಂತೆ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಘರ್ಷಣೆಯಲ್ಲಿ ತೃಣಮೂಲ ಕಾಂಗ್ರೆಸ್‍ಗೆ(ಟಿಎಂಸಿ) ಸೇರಿದ ಇಬ್ಬರು ಮೃತಪಟ್ಟಿದ್ದು, 15 ಕಾರ್ಯಕರ್ತರು ಗಾಯಗೊಂಡಿದ್ಧಾರೆ ಎಂದು ಜಿಲ್ಲಾ ಟಿಎಂಸಿ ಅಧ್ಯಕ್ಷ ಜ್ಯೋತಿಪ್ರಿಯ ಮಲ್ಲಿಕ್ ತಿಳಿಸಿದ್ದಾರೆ. ಸಿಪಿಐ(ಎಂ) ಬೆಂಬಲಿಗನೊಬ್ಬ ಸಹ ಗಲಭೆಯಲ್ಲಿ ಹತನಾಗಿದ್ದಾನೆ. ಪಂಚಾಯಿತಿ ಮಂಡಲಿ ರಚನೆ ಸಂಬಂಧ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆ ಮುನ್ನ ಇದೇ ರೀತಿಯ ಗಲಭೆಗಳು ರಾಜ್ಯದ ವಿವಿಧೆಡೆ ಸಂಭವಿಸಿದೆ. ಉತ್ತರ ದಿನಾಜ್‍ಪುರ್, ಮಾಲ್ಡಾ, ಮತ್ತು ಪುರುಲಿಯಾ ಜಿಲ್ಲೆಗಳಲ್ಲೂ ಸೋಮವಾರ ನಡೆದ ರಾಜಕೀಯ ಗುಂಪು ಘರ್ಷಣೆಗಳಲ್ಲಿ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.  ಈ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

Facebook Comments

Sri Raghav

Admin