ಮಗನ ‘ಹಾದಿ’ಯಲ್ಲೇ ಅಪ್ಪನ ದುರ್ಮರಣ, ನಂದಮೂರಿ ಕುಟುಂಬಕ್ಕೆ ಹೆದ್ದಾರಿ ಕಂಟಕ..!

ಈ ಸುದ್ದಿಯನ್ನು ಶೇರ್ ಮಾಡಿ

Nandamuri-Harikrishna

ಹೈದರಾಬಾದ್, ಆ.29- ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎನ್‍ಟಿಆರ್ ಪುತ್ರ, ಟಾಲಿವುಡ್ ನಟ-ನಿರ್ಮಾಪಕ ಹಾಗೂ ಮಾಜಿ ಸಂಸದ ನಂದಮೂರಿ ಹರಿಕೃಷ್ಣ(61) ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಇತರ ನಾಲ್ವರಿಗೂ ತೀವ್ರ ಗಾಯಗಳಾಗಿದ್ದು, ಅವರ ಸ್ಥಿತಿ ಶೋಚನೀಯವಾಗಿದೆ. ನಲ್ಗೊಂಡ ಜಿಲ್ಲೆ ಅನ್ನೇಪರ್ತಿ ಬಳಿ ಇಂದು ಮುಂಜಾನೆ 4.30ರಲ್ಲಿ ಈ ಅಪಘಾತ ಸಂಭವಿಸಿದೆ. ಅತಿವೇಗದಲ್ಲಿ ಚಲಿಸುತ್ತಿದ್ದ ಕಾರು ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವಾಗ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಹರಿಕೃಷ್ಣ ಅವರನ್ನು ನಾರ್ಕೆಟ್‍ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು.

ಟಿಡಿಪಿ ನಾಯಕ ಹರಿಕೃಷ್ಣ ಅವರು 150 ಕಿ.ಮೀ.ವೇಗದಲ್ಲಿ ಕಾರು ಚಾಲನೆ ಮಾಡುತ್ತಿದ್ದರು. ಅಪಘಾತದ ರಭಸಕ್ಕೆ ಅವರ ಎದೆಗೆ ಕಾರಿನ ಸ್ಟೀರಿಂಗ್ ಬಲವಾಗಿ ಬಡಿದಿದ್ದು, ತಲೆಗೆ ತೀವ್ರ ಗಾಯವಾಗಿ ವಿಪರೀತ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ. ಅವರನ್ನು ಉಳಿಸಲು ವೈದ್ಯರು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಲ್ಲೂರಿನ ಕಾವಲಿಯಲ್ಲಿ ಆಪ್ತ ಸ್ನೇಹಿತ ಅಭಿಮಾನಿ ಮೋಹನ್ ಅವರ ಪುತ್ರನ ವಿವಾಹದಲ್ಲಿ ಭಾಗವಹಿಸಲು ಅವರು ಹೈದರಾಬಾದ್‍ನಿಂದ ತೆರಳುತ್ತಿದ್ದರು. ನಲ್ಗೊಂಡ ಜಿಲ್ಲೆಯ ನಾರ್ಕೆಟ್‍ಪಲ್ಲಿ-ಅದ್ದಂಕಿ ಹೆದ್ದಾರಿಯಲ್ಲಿ ಮುಂಜಾನೆ 4.30ರಲ್ಲಿ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ಆಗಮಿಸಿದ್ದರು.

ಈ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಇತರ ನಾಲ್ವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಸ್ಥಿತಿ ಶೋಚನೀಯವಾಗಿದೆ.  ಹರಿಕೃಷ್ಣ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಅವರ ಪುತ್ರರಾದ ಖ್ಯಾತ ನಟ ಜ್ಯೂನಿಯರ್ ಎನ್‍ಟಿಆರ್ ಮತ್ತು ಕಲ್ಯಾಣ್ ರಾವ್, ಪುತ್ರಿ ಸುಹಾಸಿನಿ ಹಾಗೂ ಕುಟುಂಬದ ಇತರ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿದರು.  ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮರಾವತಿಯಿಂದ ಘಟನಾ ಸ್ಥಳಕ್ಕೆ ಆಗಮಿಸಿದರು.

Nandamuri-Harikrishna-2

ಸಿನಿಮಾ, ಸಮಾಜಸೇವೆ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿದ್ದ ನಂದಮೂರಿ ಹರಿಕೃಷ್ಣ ಹೆಸರಾಂತ ನಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಸಂಸ್ಥಾಪಕ ಎನ್.ಟಿ.ರಾಮರಾವ್ ಅವರ ನಾಲ್ಕನೇ ಪುತ್ರ.  ಸೆಪ್ಟೆಂಬರ್ 2, 1956ರಲ್ಲಿ ಜನಿಸಿದ್ದ ನಂದಮೂರಿ ಹರಿಕೃಷ್ಣ 1964ರಲ್ಲಿ ಶ್ರೀ ಕೃಷ್ಣಾವತಾರಂ ಸಿನಿಮಾದಲ್ಲಿ ಬಾಲನಟನಾಗಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದಲ್ಲಿ ಬಾಲಕೃಷ್ಣನಾಗಿ ನಟಿಸಿ ಗಮನಸೆಳೆದಿದ್ದರು. ನಂತರ 1970ರಲ್ಲಿ ತಲ್ಲ ಪೆಲ್ಲಮ್ಮ ಸಿನಿಮಾ ಚೈಲ್ಡ್ ಆರ್ಟಿಸ್ಟ್ ಆಗಿ ಅಭಿನಯಿಸಿದ್ದರು. ಬಳಕಿ ತಾತಮ್ಮ ಕಲಾ, ರಾಮ್=ರಹೀಮ್, ದಾನ ವೀರ ಶೂರ ಕರ್ಣ, ಶ್ರೀರಾಮುಲಯ್ಯ, ಸೀತಾರಾಮರಾಜು, ಲಹಿರಿ ಲಹಿರಿ ಲಹಿರಿಲೋ, ಶಿವ ರಾಮರಾಜು, ಸೀತಯ್ಯ, ಟೈಬರ್ ಹರಿಶ್ಚಂದ್ರ ಪ್ರಸಾದ್, ಸ್ವಾಮಿ, ಶ್ರಾವಣ ಮಾಸಂ ಮೊದಲಾದ ಸಿನಿಮಾಗಳಲ್ಲಿ ಹರಿಕೃಷ್ಣ ಅಭಿನಯಿಸಿದ್ದಾರೆ. ಅಲ್ಲದೇ ಸಿನಿಮಾ ನಿರ್ಮಾಣದಲ್ಲೂ ಅವರು ಸಕ್ರಿಯರಾಗಿದ್ದರು. ಅವರು ಟಿಡಿಪಿ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

# ಗಣ್ಯರ ಸಂತಾಪ :
ಭೀಕರ ಅಪಘಾತದಲ್ಲಿ ನಂದಮೂರಿ ಹರಿಕೃಷ್ಣ ಅಪಘಾತಕ್ಕೀಡಾದ ಸುದ್ದಿ ಬೆಳ್ಳಂಬೆಳಗ್ಗೆಯೇ ಆಂಧ್ರ ಪ್ರದೇಶಕ್ಕೆ ಸಿಡಿಲು ಬಡಿದಂತಾಗಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ವಿವಿಧ ಪಕ್ಷಗಳ ಮುಖಂಡರು, ಚಿತ್ರೋದ್ಯಮದ ಖ್ಯಾತನಾಮರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

Nandamuri-Harikrishna-1

#ಎನ್‍ಟಿಆರ್ ಕುಟುಂಬಕ್ಕೆ ಮೃತ್ಯಕೂಪವಾದ ಹೆದ್ದಾರಿ!
ಎನ್‍ಟಿಆರ್ ಕುಟುಂಬಕ್ಕೆ ನಾರ್ಕೆರ್ಟ್‍ಪಲ್ಲಿ-ಅದ್ಧಂಕಿ ಹೆದ್ದಾರಿ ಮೈತ್ಯುಕೂಪವಾಗಿ ಪರಿಣಿಮಿಸಿರುವುದು ದುರಂತ. ಇಂದು ಮುಂಜಾನೆ ನಂದಮೂರಿ ಹರಿಕೃಷ್ಣ ಬಲಿಯಾದ ಹೆದ್ದಾರಿ ಸಮೀಪವೇ ಅವರ ಪುತ್ರ ಜಾನಕಿ ರಾಮ್ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಡಿಸೆಂಬರ್ 6, 2014ರಲ್ಲಿ ಜಾನಕಿ ರಾಮ್ ಅವರನ್ನು ಇದೇ ಹೆದ್ದಾರಿ ಆಪೋಶನ ತೆಗೆದುಕೊಂಡಿತ್ತು. ಪುತ್ರನ ರೀತಿಯಲ್ಲೇ ಹರಿಕೃಷ್ಣ ಅವರು ದುರ್ಮರಣಕ್ಕೀಡಾಗಿದ್ದಾರೆ.

ಹರಿಕೃಷ್ಣ ಅವರ ಮತ್ತೊಬ್ಬ ಪುತ್ರ ಮತ್ತು ಖ್ಯಾತ ನಟ ಜ್ಯೂನಿಯರ್ ಎನ್‍ಟಿಆರ್ ಅವರಿದ್ದ ವಾಹನ ಸಹ ನಾರ್ಕೆರ್ಟ್‍ಪಲ್ಲಿ-ಅದ್ಧಂಕಿ ಹೆದ್ದಾರಿಯಲ್ಲಿ ಭೀಕರ ಅಪಘಾತಕ್ಕೀಡಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಎನ್‍ಟಿಆರ್ ಕುಟುಂಬ ಇತರ ಸದಸ್ಯರ ವಾಹನಗಳು ಇದೇ ರಸ್ತೆಯಲ್ಲಿ ಅಪಘಾತಕ್ಕೀಡಾದ ನಿದರ್ಶನಗಳಿವೆ. ಅಪಘಾತದಲ್ಲಿ ಪುತ್ರ ಜಾನಕಿ ರಾಮ್ ಸಾವಿಗೀಡಾದ ಶೋಕ ಹರಿಕೃಷ್ಣ ಅವರನ್ನು ನಿರಂತರವಾಗಿ ಕಾಡುತ್ತಿತ್ತು. ಈಗ ಇದೇ ಹೆದ್ದಾರಿಯಲ್ಲಿ ನಂದಮೂರಿ ಹರಿಕೃಷ್ಣ ದುರಂತ ಸಾವಿಗೀಡಾಗಿದ್ದಾರೆ.

Facebook Comments

Sri Raghav

Admin