ಮಾರಕಾಸ್ತ್ರಗಳಿಂದ ಕೊಚ್ಚಿ ಬಾಂಗ್ಲಾ ಟಿವಿ ವರದಿಗಾರ್ತಿಯ ಕಗ್ಗೊಲೆ

ಈ ಸುದ್ದಿಯನ್ನು ಶೇರ್ ಮಾಡಿ

TV-Reporter

ಢಾಕಾ (ಪಿಟಿಐ), ಆ.29-ಬಾಂಗ್ಲಾದೇಶದ ಟೆಲಿವಿಷನ್ ವಾಹಿನಿಯೊಂದರ ವರದಿಗಾರ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಬ್ನಾ ಜಿಲ್ಲೆಯಲ್ಲಿ ನಡೆದಿದೆ. ಆನಂದ ಟಿವಿ ಖಾಸಗಿ ವಾರ್ತಾವಾಹಿನಿಯ ಬಾತ್ಮೀದಾರೆ ಸುಬರ್ನಾ ನೋದಿ(32) ಅವರು ಹಂತಕರ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಅವರು ಡೈಲಿ ಜಾಗ್ರತೋ ಬಾಂಗ್ಲಾ ಎಂಬ ದಿನಪ್ರತಿಕೆಯಲ್ಲಿಯೂ ಸಹ ಕಾರ್ಯನಿರ್ವಹಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಾಂಗ್ಲಾದೇಶ ರಾಜಧಾನಿ ಢಾಕಾದಿಂದ 150 ಕಿ.ಮೀ.ದೂರದ ಪಬ್ನಾ ಜಿಲ್ಲೆಯ ರಾಧಾನಗರ್‍ನಲ್ಲಿ ಅವರು ವಾಸವಾಗಿದ್ದರು. ಪತಿಯಿಂದ ವಿಚ್ಛೇದನ ಪಡೆಯಲು ನ್ಯಾಯಾಲಯದಲ್ಲಿ ದಾವೆ ಹೂಡಿರುವ ಅವರಿಗೆ ಒಂಭತ್ತು ವರ್ಷದ ಮಗಳಿದ್ದಾಳೆ.

ಮೋಟಾರ್ ಸೈಕಲ್‍ಗಳಲ್ಲಿ ಬಂದ 10 ರಿಂದ 12 ಜನರಿದ್ದ ತಂಡವು ನಿನ್ನೆ ರಾತ್ರಿ 10.45ರಲ್ಲಿ ಅವರ ಮನೆಯ ಕರೆಗಂಟೆ ಬಾರಿಸಿದರು. ಸುಬರ್ನಾ ಬಾಗಿಲು ತೆರೆಯುತ್ತಿದ್ದಂತೆ ಒಳ ನುಗ್ಗಿದ ಹಂತಕರು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾದರು. ಹಂತಕರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

Facebook Comments

Sri Raghav

Admin