ಸರ್ಕಾರ 100 ದಿನ ಪೂರೈಸಿದ ಖುಷಿಯಲ್ಲಿ ಸಿಎಂ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

CM--Rahul

ನವದೆಹಲಿ, ಆ.30-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕಳೆದ 100 ದಿನಗಳ ಅವಧಿಯಲ್ಲಿ ರೈತ ಸಮುದಾಯ ಬಯಸಿದ್ದನ್ನು ಈಡೇರಿಸಿದ್ದು, ಮುಂದಿನ ದಿನಗಳಲ್ಲಿ ಜನರ ನಿರೀಕ್ಷೆಗಳನ್ನು ಈಡೇರಿಸಲು ಉತ್ತಮ ಆಡಳಿತ ನಡೆಸುವ ಭರವಸೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೆಪ್ಟೆಂಬರ್‍ನಿಂದ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ಹೇಳಿದರು. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಅಭಿವೃದ್ಧಿಗೆ ಸಿದ್ಧಪಡಿಸಲಾಗಿರುವ ನೀಲನಕ್ಷೆಯನ್ನು ಸೆಪ್ಟೆಂಬರ್‍ನಿಂದ ಜಾರಿಗೊಳಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ನಡವಳಿಕೆಗಳ ಬಗ್ಗೆ ಪ್ರತಿಯೊಂದು ಭಾಗದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಮ್ಮಿಶ್ರ ಸರ್ಕಾರ ಒಂದು ತಂಡವಾಗಿ ರಾಜ್ಯದ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರಕ್ಕೆ ಒಂದು ವರ್ಷ ಹನಿಮೂನ್ ಸಮಯ ಕೇಳುತ್ತಿಲ್ಲ, ನೂರು ದಿನಗಳಲ್ಲೇ ಸಾಕಷ್ಟು ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಆದಾಯ ಹೆಚ್ಚಳ:
ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.33ರಷ್ಟು ರಾಜ್ಯದ ಆದಾಯ ಸಂಗ್ರಹ ಹೆಚ್ಚಳವಾಗಿದೆ. ಆದಾಯ ಸಂಗ್ರಹಿಸುವಲ್ಲಿ ರಾಜ್ಯಸರ್ಕಾರ ಹಿಂದೆ ಬಿದ್ದಿಲ್ಲ. ದಾಖಲೆಯ ಪ್ರಮಾಣದಲ್ಲಿ ಆದಾಯ ಸಂಗ್ರಹವನ್ನು ಮಾಡುವ ನಿರೀಕ್ಷೆ ಇದೆ ಎಂದು ಹೇಳಿದರು. ಮೈತ್ರಿ ಸರ್ಕಾರ ಯಶಸ್ವಿಯಾಗಿ ನೂರು ದಿನವನ್ನು ಕ್ರಮಿಸಿದೆ. ಈ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಕೃತಜ್ಞತೆ ಸಲ್ಲಿಸಲಾಗುವುದು. ಸಮ್ಮಿಶ್ರ ಸರ್ಕಾರದಿಂದ ನಾಡಿನ ಜನರು ಬಯಸುವ ಹಲವು ನಿರೀಕ್ಷೆಗಳನ್ನು ಸಂಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ರಾಜ್ಯ ಸರ್ಕಾರ ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸರ್ಕಾರದ ನಡವಳಿಕೆಗಳ ಬಗ್ಗೆ ಅಧಿಕಾರಿಗಳಿಗೂ ವಿಶ್ವಾಸ ಮೂಡಿದೆ. ನಾಡಿನ ರೈತ ಸಮುದಾಯ ಹಾಗೂ ಬಿಜೆಪಿ ನಾಯಕರು ಬಯಸಿದಂತೆ ರೈತರ ಸಾಲ ಮನ್ನಾ ಬೇಡಿಕೆಯನ್ನು ಈಡೇರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಜನತಾದರ್ಶನದ ಮೂಲಕ ಹಲವು ಇಲಾಖೆಗಳ ಕಾರ್ಯವೈಖರಿ ಸುಧಾರಿಸಿದೆ. ಬಜೆಟ್ ಪ್ರಸ್ತಾಪಿತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಕೊಡಗು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಿಂದ ಅನಾಹುತವಾಗಿದೆ ಕೆಲವು ಭಾಗಗಳಲ್ಲಿ ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದೆ. ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆ ಅವರು ನೆರೆ ಹಾಗೂ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ರಾಜ್ಯ ಸರ್ಕಾರವು ನೈಸರ್ಗಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿ ಜನರ ವಿಶ್ವಾಸಕ್ಕೂ ಪಾತ್ರವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

Facebook Comments

Sri Raghav

Admin