ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸಾರ್ವಕಾಲಿಕ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

petrol-price-down

ನವದೆಹಲಿ, ಆ.30- ಪೆಟ್ರೋಲ್, ಡೀಸೆಲ್ ಬೆಲೆ ಹಿಂದೆಂದಿ ಗಿಂತಲೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜನ ಸಾಮಾನ್ಯರಿಗೆ ಬಿಸಿ ತಟ್ಟಿದೆ. ಪ್ರತಿ ಲೀಟರ್ ಪೆಟ್ರೋಲ್ 80.89 ರೂಪಾಯಿಯಾಗಿದ್ದು, ಡೀಸೆಲ್ 72.22 ರೂ.ತಲುಪಿದೆ.  ಇದು ಇತ್ತೀಚಿನ ದಿನಗಳಲ್ಲಿ ಸಾರ್ವಕಾಲಿಕ ದಾಖಲೆಯ ಏರಿಕೆಯಾಗಿದೆ.
ಈವರೆಗೂ 72ರಿಂದ 79ರೂ.ಗಡಿಯಲ್ಲಿದ್ದ ಪೆಟ್ರೋಲ್ ದರ ಏಕಾಏಕಿ 80ರೂ. ಗಡಿ ದಾಟಿದೆ. ಹಿಂದೆಂದೂ ಪೆಟ್ರೋಲ್ ಬೆಲೆ ಈ ಮಟ್ಟಕ್ಕೆ ಏರಿಕೆಯಾಗಿರಲಿಲ್ಲ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲದ ಬೆಲೆ ಪ್ರತಿ ಬ್ಯಾರೆಲ್‍ಗೆ 76.46 ಡಾಲರ್ ನಷ್ಟಿದೆ. ಈ ಹಿಂದೆ 120 ಡಾಲರ್‍ನಷ್ಟಿದ್ದಾಗಲೂ ಪೆಟ್ರೋಲ್ ಬೆಲೆಯನ್ನು 60ರಿಂದ 65ರ ಗಡಿಯಲ್ಲಿಯೇ ನಿಯಂತ್ರಿಸಲಾಗಿತ್ತು.  ಇತ್ತೀಚಿನ ದಿನಗಳಲ್ಲಿ ಪ್ರತಿ ಬ್ಯಾರಲ್‍ಗೆ 40 ಡಾಲರ್‍ಗೆ ಇಳಿದಾಗಲೂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲಿರಲಿಲ್ಲ. 2017ರ ಆಗಸ್ಟ್‍ನಲ್ಲಿ ಕಚ್ಛಾ ತೈಲದ ಬೆಲೆ ಪ್ರತಿ ಬ್ಯಾರಲ್‍ಗೆ 52 ಡಾಲರ್, 2018ರ ಜನವರಿಯಲ್ಲಿ 70 ಡಾಲರ್, 2018ರ ಏಪ್ರಿಲ್ ಅಂತ್ಯದಲ್ಲಿ 80ಡಾಲರ್‍ನಷ್ಟಿತ್ತು. ಈಗ ಸರಿಸುಮಾರು 76 ಡಾಲರ್‍ಗಳಷ್ಟಿದೆ.

ಪೆಟ್ರೋಲ್ ಬೆಲೆ ಮಾರ್ಚ್‍ನಲ್ಲಿ 72.74ರಿಂದ 74.71ರೂ. ಗಡಿಯಲ್ಲಿತ್ತು. ಏಪ್ರಿಲ್‍ನಲ್ಲಿ 74.90ರಿಂದ 75.80ರೂ.ನಷ್ಟಿತ್ತು. ಮೇನಲ್ಲಿ 75.82ರೂ.ನಿಂದ 79.71ರೂ.ನಷ್ಟಿತ್ತು. ಜೂನ್‍ನಲ್ಲಿ 76.77ರಿಂದ 79.57ರೂ. ಇತ್ತು. ಜುಲೈನಲ್ಲಿ 76.97ರಿಂದ 79.30ರೂ.ನಡುವೆ ನಿಯಂತ್ರಣದಲ್ಲಿತ್ತು. ಈ ತಿಂಗಳಲ್ಲಿ 78.81ರೂ.ನಿಂದ 80.77ರೂ.ಗೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನದಲ್ಲಿ 14ಪೈಸೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.

ಪೆಟ್ರೋಲ್ ದರ ಏರಿಕೆಯಾಗುತ್ತಿರುವುದು ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಇನ್ನು ಡೀಸೆಲ್ ದರ ಏರಿಕೆಯಿಂದ ಸರಕು ಸಾಗಾಣಿಕೆ ಮೇಲೆ ಪರಿಣಾಮ ಬೀರುತ್ತಿದ್ದು, ಬೆಲೆ ಏರಿಕೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಕಳೆದ ಬಜೆಟ್‍ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸ್ಥಳೀಯ ತೆರಿಗೆಯನ್ನು ಶೇ.2ರಷ್ಟು ಹೆಚ್ಚಳ ಮಾಡಿದಾಗ ಭಾರೀ ವಿರೋಧ ವ್ಯಕ್ತವಾಗಿತ್ತು.  ಪೆಟ್ರೋಲ್ ಮೇಲೆ ಶೇ.30ರಷ್ಟಿದ್ದ ಸ್ಥಳೀಯ ತೆರಿಗೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಶೇ.30ರಿಂದ 32ಕ್ಕೆ ಹೆಚ್ಚಿಸಿತ್ತು. ಡೀಸೆಲ್ ಮೇಲಿದ್ದ ಸ್ಥಳೀಯ ತೆರಿಗೆಯನ್ನು ಶೇ.19ರಿಂದ 21ಕ್ಕೆ ಏರಿಕೆ ಮಾಡಿತ್ತು.

ಆದರೂ ಪೆಟ್ರೋಲ್ ಬೆಲೆ 80ರ ಗಡಿ ದಾಟಿರಲಿಲ್ಲ. ಈಗ ವಿನಾಕಾರಣ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಪೆಟ್ರೋಲ್ ಬಂಕ್‍ಗಳ ಮುಂದೆ ನಿಂತು ಕೇಂದ್ರ ಸರ್ಕಾರಿ ಸ್ವಾಮ್ಯದ ಆಯಿಲ್ ಕಂಪೆನಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin