ಬಿಮ್‍ಸ್ಟೆಕ್ ಶೃಂಗಸಭೆಗೆ ತೆರಳಿದ ಮೋದಿಗೆ ನೇಪಾಳದಲ್ಲಿ ಅದ್ದೂರಿ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಕಠ್ಮಂಡು (ಪಿಟಿಐ), ಆ.30- ಹಿಮಾಲಯ ರಾಷ್ಟ್ರ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಇಂದಿನಿಂದ ಎರಡು ದಿನಗಳ ಬಹು ವಿಭಾಗೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ(ಬೇ ಆಫ್ ಬೆಂಗಾಳ್ ಇನಿಷಿಯೇಟಿವ್ ಫಾರ್ ಮಲ್ಟಿ ಸೆಕ್ಟೊರಲ್ ಟೆಕ್ನಿಕಲ್ ಅಂಡ್ ಎಕನಾಮಿಕ್ ಕೋ-ಆಪರೇಷನ್-ಬಿಮ್‍ಸ್ಟೆಕ್) ಶೃಂಗಸಭೆ ಆರಂಭವಾಗಿದೆ.

ಬಂಗಾಳಕೊಲ್ಲಿ ಸಮುದ್ರ ತೀರದ ಭಾರತ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಥೈಲೆಂಡ್, ಭೂತಾನ್ ಮತ್ತು ಮ್ಯಾನ್ಮಾರ್ ದೇಶಗಳ ಒಕ್ಕೂಟವೇ ಬಿಮ್‍ಸ್ಟೆಕ್. ಈ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ರಾಜಧಾನಿಯಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿ ಕಠ್ಮಂಡು ತಲುಪಿದರು. ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ನೇಪಾಳದ ಉನ್ನತ ನಾಯಕರು ಮತ್ತು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ಪ್ರಧಾನಿಯಾದ ನಂತರ ಇದು ಮೋದಿ ಅವರ ನಾಲ್ಕನೇ ಹಿಮಾಲಯ ರಾಷ್ಟ್ರದ ಭೇಟಿಯಾಗಿದೆ.

ಇಂದು ಮತ್ತು ನಾಳೆ ಆಯೋಜಿತವಾಗಿರುವ ಬಿಮ್‍ಸ್ಟೆಕ್ ಶೃಂಗಸಭೆ ಸಂದರ್ಭದಲ್ಲಿ ಮೋದಿ ಆರು ದೇಶಗಳ ಅಗ್ರನಾಯಕರೊಂದಿಗೆ ಬಂಗಾಳಕೊಲ್ಲಿ ಪ್ರಾಂತ್ಯದ ರಕ್ಷಣೆ, ಭದ್ರತೆ, ಆರ್ಥಿಕ ಅಭಿವೃದ್ದಿ ಸೇರಿದಂತೆ ಅನೇಕ ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.  ಏಳು ರಾಷ್ಟ್ರಗಳ ಅಗ್ರನಾಯಕರು ಶೃಂಗಸಭೆಯಲ್ಲಿ ಭಾಗವಹಿಸಿರುವುದರಿಂದ ಕಠ್ಮಂಡು ಸೇರಿದಂತೆ ನೇಪಾಳದಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಮೋದಿ ಮತ್ತು ವಿವಿಧ ದೇಶದ ಅಧಿಪತಿಗಳಿಗೆ ನಾಲ್ಕು ಪದರಗಳ ಭದ್ರತೆ ಒದಗಿಸಲಾಗಿದೆ. ಇದರಲ್ಲಿ ನೇಪಾಳ ಸೇನೆ, ಶಸ್ತ್ರಸಜ್ಜಿತ ಪಡೆ, ನೇಪಾಳ ಯೋಧರು ಮತ್ತು ರಾಷ್ಟ್ರೀಯ ತನಿಖಾ ವಿಭಾಗದ ಸಿಬ್ಬಂದಿಯನ್ನು ಇದು ಒಳಗೊಂಡಿದೆ. ಅಲ್ಲದೆ, ವಿಶೇಷ ಕಮ್ಯಾಂಡೊಗಳು ಹಾಗೂ ಭಯೋತ್ಪಾದನೆ ಮತ್ತು ಮಾವೋವಾದಿ ನಿಗ್ರಹ ಪಡೆಗಳನ್ನು ಸಹ ಗಣ್ಯರ ರಕ್ಷಣೆಗಾಗಿ ನಿಯೋಜಿಸಲಾಗಿದೆ. ನೇಪಾಳ ಸರ್ಕಾರ ಅತಿ ಗಣ್ಯರ ರಕ್ಷಣೆ ಹಾಗೂ ಶೃಂಗಸಭೆ ಸುಸೂತ್ರವಾಗಿ ನಡೆಯಲು ಒಟ್ಟು 30,000 ಭದ್ರತಾ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಿದೆ.

ಬಿಮ್‍ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಹಲವು ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಕಠ್ಮಂಡುವಿನ ವಿಶ್ವವಿಖ್ಯಾತ ಪಶುಪತಿನಾಥ ದೇವಾಲಯದ ಆವರಣದಲ್ಲಿ ಭಾರತೀಯ ನೆರವಿನೊಂದಿಗೆ ನಿರ್ಮಿಸಲಾಗಿರುವ ವಿಶ್ರಾಂತಿ ಗೃಹವನ್ನು ಮೋದಿ, ನೇಪಾಳದ ಪ್ರಧಾನಮಂತ್ರಿ ಕೆ.ಪಿ. ಒಲಿ ಅವರಿಗೆ ಹಸ್ತಾಂತರಿಸಿದರು.

2001ರಲ್ಲಿ ಈ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಇದಕ್ಕಾಗಿ ಭಾರತ ಸರ್ಕಾರ 22 ಕೋಟಿ ರೂ.ಗಳನ್ನು ನೇಪಾಳಕ್ಕೆ ಕೊಡುಗೆಯಾಗಿ ನೀಡಿತ್ತು. ಈ ವಿಶ್ರಾಂತಿ ಗೃಹ್ ಪಂಚತಾರಾ ಹೋಟೆಲ್‍ಗಳಂಥ ಸಕಲ ಸೌಲಭ್ಯಗಳೊಂದಿಗೆ ಭವ್ಯ ಕಟ್ಟಡ ಹೊಂದಿದ್ದು, ಒಟ್ಟು 82 ಕೊಠಡಿಗಳಿವೆ. ಇಲ್ಲಿ ಒಮ್ಮೆಗೆ 400 ಯಾತ್ರಾತ್ರಿಗಳು ವಾಸ್ತವ್ಯ ಹೂಡುವ ವ್ಯವಸ್ಥೆ ಇದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin