ಮತಯಾಚನೆ ವೇಳೆ ರೌಡಿಶೀಟರ್’ಗಳ ನಡುವೆ ಘರ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Election-Fight--01
ತುಮಕೂರು, ಆ.30- ತುಮಕೂರು ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಇಬ್ಬರು ರೌಡಿಶೀಟರ್’ಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಇವರಿಬ್ಬ ರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನಂತರ ಜಾಮೀನಿನ ಮೇಲೆ ರಾತ್ರಿ ಬಿಡುಗಡೆ ಮಾಡಲಾಗಿದೆ. ಜೆಡಿಎಸ್ ಅಭ್ಯರ್ಥಿ ರವಿಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಸತೀಶ್‍ಕುಮಾರ್ ಅಲಿಯಾಸ್ ಟೋಪಿ ಸತೀಶ್ ಕ್ಯಾತ್ಸಂದ್ರ ಠಾಣೆಯ ರೌಡಿ ಶೀಟರ್’ಗಳು.

ಇವರಿಬ್ಬರೂ 22ನೇ ವಾರ್ಡ್ ನಿಂದ ಸ್ಪರ್ಧಿಸಿದ್ದು, ಮೊನ್ನೆ ಸಂಜೆ ಮತಯಾಚನೆ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆಗೆ ಕಾರಣವಾಗಿತ್ತು. ಗಾಯಗೊಂಡಿದ್ದ ಸತೀಶ್‍ಕುಮಾರ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೊಸ ಬಡಾವಣೆ ಪೊಲೀಸ್ ಠಾಣೆಗೆ ನಿನ್ನೆ ದೂರು ನೀಡಿದ್ದರು. ದೂರಿನನ್ವಯ ತಿಲಕ್‍ಪಾರ್ಕ್ ವೃತ್ತ ನಿರೀಕ್ಷಕ ರಾಧಾಕೃಷ್ಣ, ಇನ್‍ಸ್ಪೆಕ್ಟರ್ ರಾಘವೇಂದ್ರ ಅವರ ತಂಡ ಎರಡೂ ಕಡೆಯವರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು.

ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೂ ಇವರಿಬ್ಬರನ್ನು ಠಾಣೆಯಲ್ಲೇ ಕೂರಿಸಿ ಕೊಂಡಿದ್ದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾಗೋಪಿನಾಥ್ ಅವರಿಗೆ ಮಾಹಿತಿ ತಿಳಿದು ತಕ್ಷಣವೇ ಹೆಚ್ಚುವರಿ ಪೊಲೀಸ್  ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್‍ಪಿ ನಾಗರಾಜ್ ದಿಢೀರ್ ಠಾಣೆಗೆ ಭೇಟಿ ನೀಡಿ ಸಬ್
ಇನ್ಸ್‍ಪೆಕ್ಟರ್ ರಾಘವೇಂದ್ರ ಅವರಿಂದ ಮಾಹಿತಿ ಪಡೆದುಕೊಂಡರು. ಅನಗತ್ಯವಾಗಿ ಇವರಿಬ್ಬರನ್ನು ಠಾಣೆ ಯಲ್ಲಿ ಕೂರಿಸಿಕೊಂಡಿರುವ ಬಗ್ಗೆ ಠಾಣೆಯಲ್ಲಿದ್ದ ಪೊಲೀಸರ ವಿರುದ್ಧ ತೀವ್ರ ತರಾಟೆಗೆ ತೆಗೆದುಕೊಂಡು, ಇವರಿಬ್ಬ ರನ್ನು ತಕ್ಷಣವೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನಿನ ಮೇಲೆ ರಾತ್ರಿಯೇ ಬಿಡುಗಡೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Facebook Comments