ಗೂಂಡಾಕಾಯ್ದೆಯಡಿ ರೌಡಿ ಶೀಟರ್ ರವಿಕುಮಾರ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

raudi-sheeter-ravi-kumar
ಬೆಂಗಳೂರು, ಆ.30-ಕೊಲೆ, ಕೊಲೆಯತ್ನ ಸೇರಿ 15ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ರವಿ ಕುಮಾರ್ ಅಲಿಯಾಸ್ ಟ್ಯಾಂಗೋನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಶೆಟ್ಟಿಪುರ ಗ್ರಾಮದ ರವಿಕುಮಾರ್ ಅಪರಾಧ ಹಿನ್ನೆಲೆ ಹೊಂದಿದ್ದು, ನಗರದ ಕಾಮಾಕ್ಷಿಪಾಳ್ಯದ ಸಣ್ಣಕ್ಕಿ ಬಯಲು ಬಳಿಯ ವೃಷಭಾವತಿನಗರದ 4ನೆ ಕ್ರಾಸ್‍ನಲ್ಲಿ ನೆಲೆಸಿದ್ದ. ಈತನ ವಿರುದ್ಧ ಬಸವೇಶ್ವರನಗರ, ಚಂದ್ರಾಲೇಔಟ್, ಕಾಮಾಕ್ಷಿಪಾಳ್ಯ, ಮಾದನಾಯಕನಹಳ್ಳಿ, ವಿಜಯನಗರ, ರಾಜಗೋಪಾಲನಗರ, ಕಾಟನ್‍ಪೇಟೆ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಹಲ್ಲೆ, ಅಕ್ರಮ ಕೂಟ ಸೇರಿ ಒಟ್ಟು 15 ಪ್ರಕರಣಗಳು ದಾಖಲಾಗಿವೆ.

ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಈತ ಸಮಾಜದ್ರೋಹಿ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಈ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ರವಿ ಡಿ.ಚನ್ನಣ್ಣನವರ್ ಅವರಿಗೆ ಸೂಚಿಸಿದ್ದರು.

ಅದರಂತೆ ವಿಜಯನಗರ ಉಪ ವಿಭಾಗದ ಎಸಿಪಿ ಪರಮೇಶ್ವರ್ ಹೆಗಡೆ ಮತ್ತು ಬಸವೇಶ್ವರನಗರ ಪೊಲೀಸ್ ಇನ್ಸ್‍ಪೆಕ್ಟರ್ ಜಿ.ಸೋಮಶೇಖರ್ ಈತನ ವಿರುದ್ಧ ವರದಿ ತಯಾರಿಸಿ ಡಿಸಿಪಿಗೆ ಸಲ್ಲಿಸಿದ್ದರು. ಇದೀಗ ರವಿಕುಮಾರ್‍ನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಪಶ್ಚಿಮ ನಗರ ವಿಭಾಗದ ಪೊಲೀಸರಿಂದ ಕಳೆದ ಮೂರು ದಿನಗಳಲ್ಲಿ ಗೂಂಡಾ ಕಾಯ್ದೆಯಡಿಯಲ್ಲಿ ಬಂಧನ ಮಾಡಿದ ಎರಡನೇ ಪ್ರಕರಣವಾಗಿದ್ದು, ಈ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವ ರೌಡಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಡಿಸಿಪಿ ರವಿ ಡಿ.ಚನ್ನಣ್ಣನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin