ಆರ್ಟಿಕಲ್ 35ಎ ವಿಧಿ ಕುರಿತ ವಿಚಾರಣೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

supreme-ocurt

ನವದೆಹಲಿ, ಆ.31-(ಪಿಟಿಐ) ಜಮ್ಮು- ಕಾಶ್ಮೀರದ ಖಾಯಂ ನಿವಾಸಿಗಳಿಗೆ ವಿಶೇಷ ಅಧಿಕಾರವನ್ನು ನೀಡುವ ಭಾರತೀಯ ಸಂವಿಧಾನದ 35ಎ ವಿಧಿ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವರ್ಷ ಜನವರಿಗೆ ಮುಂದೂಡಿದೆ.

ಕಾಶ್ಮೀರ ಕಣಿವೆಯ ನಿವಾಸಿಗಳಿಗೆ ವಿಶೇಷ ಹಕ್ಕುಗಳು ಮತ್ತು ಸೌಲಭ್ಯ ಹಾಗೂ ಸವಲತ್ತುಗಳನ್ನು ಒದಗಿಸುವ ಈ ವಿಧಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ವಿಚಾರಣೆ ನಡೆಸಿತು. ಕಣಿವೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಇರುವುದರಿಂದ ಈ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿತು.

ಈ ಪ್ರಕರಣದ ವಿಚಾರಣೆಯನ್ನು 2019ರ ಜನವರಿಯಲ್ಲಿ ನಡೆಸುವುದಾಗಿ ಹಿರಿಯ ನ್ಯಾಯಮೂರ್ತಿಗಳಾದ ಎ.ಎಂ. ಕಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ತಿಳಿಸಿದೆ. ಕೇಂದ್ರ ಸರ್ಕಾರವನ್ನು ಪ್ರತಿ ನಿಧಿಸಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣು ಗೋಪಾಲ್ ಮತ್ತು ಜಮ್ಮು-ಕಾಶ್ಮೀರದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಜ್ಯದಲ್ಲಿ ಈಗ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಇದೆ. 8 ಹಂತಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಸಹ ನಡೆಯಬೇಕಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಈ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದರು. ಇದನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ.

Facebook Comments

Sri Raghav

Admin