ಕಾಶೀನಾಥ್ ಚಿತ್ರಗಳ ಖಾಯಂ ನಟ ಗೋಟೂರಿ ಅಂತ್ಯಸಂಸ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Actor-Goturi
ಬೆಂಗಳೂರು,ಆ.31- ಕನ್ನಡ ಚಿತ್ರರಂಗದ ಹಿರಿಯ ನಟ, ಸಾಹಿತಿ ಗೋಟೂರಿ ಅವರ ಅಂತ್ಯಸಂಸ್ಕಾರವು ಇಂದು ಯಲಹಂಕದಲ್ಲಿ ನೆರವೇರಿತು.  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಗೋಟೂರಿ ಅವರು ನಿನ್ನೆ ಸಂಜೆ ಯಲಹಂಕದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.  ಚಿತ್ರರಂಗದಲ್ಲಿ ಸುಮಾರು 3 ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಗೋಟೂರಿ ಅವರು ಉಪೇಂದ್ರ ನಿರ್ದೇಶಿಸಿ ಕುಮಾರ್ ಗೋವಿಂದ್ ನಿರ್ಮಿಸಿ, ನಟಿಸಿದ್ದ ಶ್ ಚಿತ್ರದಲ್ಲಿ ನಾಯಕಿಯ ತಂದೆಯಾಗಿ ನಟಿಸಿದ್ದ ಅವರು, ಕಾಶೀನಾಥ್ ಅವರ ಚಿತ್ರಗಳಲ್ಲಿ ಖಾಯಂ ನಟನಾಗಿಯೂ ಗುರುತಿಸಿಕೊಂಡಿದ್ದರು.

ನಟನೆಗಿಂತ ತಮ್ಮ ಸಾಹಿತ್ಯದಿಂದ ಗುರುತಿಸಿಕೊಂಡಿದ್ದ ಗೋಟೂರಿ ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ್ದ ಆಪ್ತಮಿತ್ರ, ಆಪ್ತರಕ್ಷಕ, ಏಕದಂತ, ಮಸ್ತಿ, ಶುಕ್ರ, ರಾಮಶಾಮಭಾಮ, ನಮ್ಮಣ್ಣ, ಚೆಲ್ಲಾಟ ಸೇರಿದಂತೆ ಹಲವು ಚಿತ್ರಗಳಿಗೆ ಸಾಹಿತ್ಯ ರಚಿಸಿದ್ದು ಇವರು ಆಪ್ತಮಿತ್ರಕ್ಕಾಗಿ ರಚಿಸಿ ಸೌಂದರ್ಯ ನಟಿಸಿದ್ದ ರಾರಾ… ಚಿತ್ರಗೀತೆಯು ಇವರಿಗೆ ಹೆಸರು ತಂದುಕೊಟ್ಟಿತ್ತು. ನಟನೆ, ಸಾಹಿತ್ಯ ಮಾತ್ರವಲ್ಲದೆ ಓಂಸಾಯಿಪ್ರಕಾಶ್ ನಿರ್ದೇಶಿಸಿದ್ದ ಆದಿಚುಂಚನಗಿರಿ ಚಿತ್ರಕ್ಕೆ ಚಿತ್ರಕಥೆಯನ್ನೂ ರಚಿಸಿದ್ದರು.  ಬೆಳ್ಳಿತೆರೆ ಮಾತ್ರವಲ್ಲದೆ ಕಿರುತೆರೆಯಲ್ಲೂ ತಮ್ಮನ್ನೂ ಗುರುತಿಸಿಕೊಂಡಿದ್ದ ಗೋಟೂರಿ ಕಲಿಕರ್ಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ತಮ್ಮ ನಟನೆ ಹಾಗೂ ಸಾಹಿತ್ಯದಿಂದ ಮನೆಮಾತಾಗಿದ್ದರು. ಗೋಟೂರಿ ಅವರ ಅಂತ್ಯಸಂಸ್ಕಾರದಲ್ಲಿ ಬೆಳ್ಳಿತೆರೆ ಹಾಗೂ ಕಿರುತೆರೆಯ ಹಲವು ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಂಡಿದ್ದರು.

Facebook Comments

Sri Raghav

Admin