ಲೋಕಲ್ ಫೈಟ್ : ಮತದಾನ ಆರಂಭ, ಇಂದು ನಿರ್ಧಾರವಾಗಲಿದೆ 9121 ಅಭ್ಯರ್ಥಿಗಳ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

Voting--011

ಬೆಂಗಳೂರು, ಆ.31- ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ, ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, 9121 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.  ಒಟ್ಟು 2574 ವಾರ್ಡ್‍ಗಳಿಗೆ ವಿವಿಧ ಪಕ್ಷಗಳು, ಪಕ್ಷೇತರರು ಸೇರಿದಂತೆ 9121 ಅಭ್ಯರ್ಥಿಗಳು ಕಣದಲ್ಲಿದ್ದು,ಸೆ.3ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ನಡೆಯುವ ಪ್ರದೇಶಗಳಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಆಯಾ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಪೊಲೀಸರ ತಂಡ, ಫ್ಲೈಯಿಂಗ್ ಸ್ಕ್ವಾಡ್, ಮತಗಟ್ಟೆಗಳಿಗೆ ಪೊಲೀಸ್ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾಗಿರುವ ಮತದಾನ ಸಂಜೆ 5 ಗಂಟೆವರೆಗೆ ನಡೆಯಲಿದೆ.

ಪ್ರಕೃತಿ ವಿಕೋಪದಿಂದ ಉಂಟಾಗಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿ ಚುನಾವಣೆಯನ್ನು ತಡೆಹಿಡಿಯಲಾಗಿದೆ. ಕೆಲವು ನಗರ ಸಭೆಗಳಿಂದ 12 ವಾರ್ಡ್‍ಗಳಿಗೆ ಹಾಗೂ ಪುರಸಭೆಗಳಿಂದ 17 ವಾರ್ಡ್‍ಗಳಿಗೆ ಒಟ್ಟು 29 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಲಬುರಗಿ ಜಿಲ್ಲೆ ಅಫ್ಜಲ್‍ಪುರ ಪುರಸಭೆ ವಾರ್ಡ್ ನಂ.19ರ ಎಲ್ಲ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತವಾಗಿದ್ದರಿಂದ ಈ ವಾರ್ಡ್‍ಗೆ ಚುನಾವಣೆ ನಡೆಯುತ್ತಿಲ್ಲ. ಅದೇ ರೀತಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ನಗರಸಭೆಯ ವಾರ್ಡ್ ನಂ.9ರಲ್ಲಿ ಸ್ಪರ್ಧಿಸಿದ್ದ ಮನ್ನಣೆ ಪಡೆದ ಬಿಎಸ್‍ಪಿ ಅಭ್ಯರ್ಥಿ ಸಿ.ಎಸ್.ರಮೇಶ್ ನಿಧನದ ಹಿನ್ನೆಲೆಯಲ್ಲಿ ಈ ವಾರ್ಡ್‍ನ ಚುನಾವಣೆಯನ್ನು ರದ್ದುಪಡಿಸಲಾಗಿದೆ.

Facebook Comments

Sri Raghav

Admin