ಹೇಮಾವತಿಯಿಂದ ನೀರು ಹರಿಸುವಂತೆ ಶಾಸಕ ಬಿ.ಸತ್ಯನಾರಾಯಣ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

MLA-B-Sathyanarayana

ಶಿರಾ, ಆ.31- ದೊಡ್ಡಕೆರೆಗೆ ಹೇಮಾವತಿ ನೀರು ಹರಿಸುವಂತೆ ಹೇಮಾವತಿ ನಾಲಾ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಶಾಸಕ ಬಿ.ಸತ್ಯನಾರಾಯಣ, ನೀರು ಹರಿಸಲು ಪಟ್ಟು ಹಿಡಿದು ನಿನ್ನೆ ಸಂಜೆಯಿಂದಲೇ ಧರಣಿ ಆರಂಭಿಸಿದ್ದಾರೆ. ಶಿರಾ ಭಾಗಕ್ಕೆ ಹರಿಯುತ್ತಿದ್ದ ನೀರನ್ನು ನಿಲ್ಲಿಸಿರುವ ಕುರಿತ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತ ಶಾಸಕರು, ತಕ್ಷಣ ಹೇಮಾವತಿ ನಾಲಾ ಎಂಜಿನಿಯರ್ ವಿಭಾಗದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶಿರಾ ದೊಡ್ಡಕೆರೆ ವೀಕ್ಷಿಸುವಂತೆ ತಾಕೀತು ಮಾಡಿದ್ದಾರೆ. ಸಂಜೆ ವೇಳೆಗೆ ನಗರಕ್ಕೆ ಆಗಮಿಸಿದ ನಾಲಾ ಮುಖ್ಯ ಎಂಜಿನಿಯರ್ ರಾಮಕೃಷ್ಣ ಮತ್ತು ತಂಡವನ್ನು ದೊಡ್ಡಕೆರೆ ಪಂಪ್‍ಹೌಸ್ ಬಳಿಗೆ ಕರೆದೊಯ್ದು, ಒಣಗಿದ ಕೆರೆ ತೋರಿಸಿ ವೇಳಾಪಟ್ಟಿಗೆ ಕಾಯದೆ ತಕ್ಷಣದಿಂದಲೇ ನೀರು ಹರಿಸುವಂತೆ ಒತ್ತಾಯಿಸಿದರು. ಸಮಜಾಯಿಷಿ ಹೇಳಹೊರಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ, ಜಿಲ್ಲೆಯ ಇತರೆ ಭಾಗಗಳಲ್ಲಿ ಈಗಾಗಲೇ ಹಲವಾರು ಕೆರೆಗಳು ತುಂಬಿದ್ದರೆ, ನೀರು ಹರಿಸುತ್ತಿರುವ ಭಾಗದ ಕೆರೆಗಳಲ್ಲಿ ಅರ್ಧಮಟ್ಟಕ್ಕೂ ಹೆಚ್ಚು ನೀರು ತುಂಬಿಸಲಾಗಿದೆ. ಆದರೆ, ಶಿರಾ ಕೆರೆಯಲ್ಲಿ ಕುಡಿಯಲೂ ನೀರಿಲ್ಲದಂತಾಗಿದೆ. ಇದು ಜನರಲ್ಲಿ ಸಹಜವಾಗಿ ಆತಂಕ ಹೆಚ್ಚಿಸಿದೆ.

ಇಂದು ಮತ್ತು ನಾಳೆ ಇಲ್ಲಿನ ಪಂಪ್‍ಹೌಸ್‍ನಲ್ಲಿ ಪ್ರತಿಭಟನೆ ನಡೆಸುತ್ತೇನೆ. ಅಷ್ಟರಲ್ಲಿ ನೀರು ಹರಿಸದೆ ಹೋದಲ್ಲಿ, ಪಟ್ರಾವತನಹಳ್ಳಿ ಎಸ್ಕೇಪ್ ಗೇಟ್ ಬಳಿಯೇ ಬಂದು ಪ್ರತಿಭಟಿಸುತ್ತೇನೆ. ನನ್ನ ಜನರಿಗೆ ನೀರು ಹರಿಸಲಾಗದಿದ್ದರೆ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಲು ಸಿದ್ಧ ಎಂದರು. ನಗರಸಭೆ ಅಧ್ಯಕ್ಷ ಅಮಾನುಲ್ಲಾಖಾನ್, ಎಇಇ ಸೇತುರಾಂ ಸಿಂಗ್ ಮತ್ತಿತರರು ಇದ್ದರು. ತಕ್ಷಣದಿಂದಲೇ ನೀರು ಹರಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಕನಿಷ್ಟ 75 ಕ್ಯೂಸೆಕ್ ಅನ್ವಯ 120 ದಿನಗಳು ನೀರು ಹರಿದರೆ ಕಳ್ಳಂಬೆಳ್ಳ, ಶಿರಾ ಅಲ್ಲದೆ ಮದಲೂರು ಕೆರೆಯೂ ತುಂಬಲಿದೆ. ಸದ್ಯ ಚಾನಲ್‍ನಿಂದ ಕಾಲುವೆಗೆ ಹರಿಸಿದ ನೀರು ಕಳ್ಳಂಬೆಳ್ಳ ಕೆರೆ ತಲುಪಿದ ಕೂಡಲೇ ಅಲ್ಲಿಂದ ಶಿರಾದೆಡೆಗೆ ನೀರು ಹರಿಸುವ ಜವಾಬ್ದಾರಿ ಸ್ಥಳೀಯ ಆಡಳಿತ ಸಂಸ್ಥೆ ಮತ್ತು ನಾಯಕರು ವಹಿಸಿಕೊಳ್ಳಬೇಕು ಎಂದರು. ಸಹಾಯಕ ಅಭಿಯಂತರ ನಾಗಭೂಷಣ್, ಕೇಶವ ತಂಡದಲ್ಲಿದ್ದರು.

Facebook Comments