ವಿಮಾನದಲ್ಲಿ ಮಹಿಳಾ ಆಸನದ ಮೇಲೆ ಸೂಸೂ ಮಾಡಿದ ಪಾನಮತ್ತ ಪ್ರಯಾಣಿಕ..!

ಈ ಸುದ್ದಿಯನ್ನು ಶೇರ್ ಮಾಡಿ

Air-India

ನವದೆಹಲಿ, ಸೆ.1 (ಪಿಟಿಐ)- ಕೆಲವು ಅಹಿತಕರ ಘಟನೆಗಳಿಂದ ಮುಜುಗರಕ್ಕೆ ಒಳಗಾಗಿರುವ ಏರ್‍ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಪಾನಮತ್ತನೊಬ್ಬ ಮಹಿಳಾ ಆಸನದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿದೆ. ಇದರಿಂದ ಪೇಚಿಗೆ ಸಿಲುಕಿರುವ ನಾಗರಿಕ ವಿಮಾನಯಾನ ಸಚಿವಾಲಯ ಈ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಏರ್‍ಇಂಡಿಯಾಗೆ ಸೂಚನೆ ನೀಡಿದೆ.

ನವದೆಹಲಿಯಿಂದ ನ್ಯೂಯಾರ್ಕ್‍ಗೆ ತೆರಳುತ್ತಿದ್ದ ಎಐ-102 ಏರ್ ಇಂಡಿಯಾ ವಿಮಾನದಲ್ಲಿ ಆ.30ರಂದು ಈ ಘಟನೆ ನಡೆದಿದೆ. ಈ ಘಟನೆಯಿಂದ ಕಿರಿಕಿರಿಗೆ ಒಳಗಾದ ಮಹಿಳೆಯ ಪುತ್ರಿ ಇಂದ್ರಾಣಿ ಘೋಷ್ ನಿನ್ನೆ ಟ್ವೀಟ್ ಮಾಡಿದ್ದಾರೆ. ತನ್ನ ತಾಯಿಗೆ ವಿಮಾನದಲ್ಲಿ ಆದ ಅಹಿತಕರ ಘಟನೆಯನ್ನು ವಿವರಿಸಿದ್ದಾರೆ.

ಎಐ-102 ಜೆಎಫ್‍ಕೆ-ದೆಹಲಿ ಮಾರ್ಗದ ವಿಮಾನದ ಆಸನ ಸಂಖ್ಯೆ 36-ಡಿ ಸೀಟ್‍ನಲ್ಲಿ ಕುಳಿತು ನನ್ನ ತಾಯಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ತೀವ್ರ ಮುಜುಗರಕ್ಕೀಡಾಗುವ ಘಟನೆ ನಡೆಯಿತು. ಪಾನಮತ್ತನಾಗಿದ್ದ ಪ್ರಯಾಣಿಕನೊಬ್ಬ ಊಟದ ನಂತರ ನನ್ನ ತಾಯಿ ಕುಳಿತ್ತಿದ್ದ ಸ್ಥಳಕ್ಕೆ ಧಾವಿಸಿ ಪ್ಯಾಂಟ್ ತೆಗೆದು ಸೀಟ್ ಮೇಲೆ ಮೂತ್ರ ವಿಸರ್ಜನೆ ಮಾಡಿದ. ಇದರಿಂದ ನನ್ನ ತಾಯಿ ತೀವ್ರ ದಿಗ್ಭ್ರಮೆಗೆ ಒಳಗಾದರು.

ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ಇಂದ್ರಾಣಿ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಏರ್ ಇಂಡಿಯಾ ಸಂಸ್ಥೆ ಮುಖ್ಯಸ್ಥರನ್ನು ಆಗ್ರಹಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಹಾಯಕ ಸಚಿವ ಜಯಂತ್ ಸಿನ್ಹಾ, ಈ ಕೂಡಲೇ ವರದಿ ನೀಡುವಂತೆ ಏರ್ ಇಂಡಿಯಾಗೆ ಸೂಚನೆ ನೀಡಿದ್ದಾರೆ.

Facebook Comments

Sri Raghav

Admin