ನಕಲಿ ಸುದ್ದಿ : ಐಟಿ ಸಂಸ್ಥೆಗಳ ಮುಖ್ಯಸ್ಥರಿಗೆ ಕ್ರಿಮಿನಲ್ ಕಂಟಕ

ಈ ಸುದ್ದಿಯನ್ನು ಶೇರ್ ಮಾಡಿ

Fake-News-Spedders-facing-C

ನವದೆಹಲಿ, ಸೆ.1 (ಪಿಟಿಐ)- ನಕಲಿ ಸುದ್ದಿಗಳನ್ನು ಹಬ್ಬಿಸಲು ತಮ್ಮ ವೇದಿಕೆಗಳು ಬಳಕೆ ಯಾಗಿದ್ದಲ್ಲಿ ಭಾರತದ ಮುಂಚೂಣಿ ಮಾಹಿತಿ ತಂತ್ರಜ್ಞಾನ  ಸಂಸ್ಥೆಗಳ ಮುಖ್ಯಸ್ಥರು ಕ್ರಿಮಿನಲ್ ಕಾನೂನು ಕಂಟಕಕ್ಕೆ ಗುರಿಯಾಗಲಿದ್ದಾರೆ.  ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಹಾಗೂ ಗಲಭೆ, ಹಿಂಸಾಚಾರ ಮತ್ತು ದೊಂಬಿ ಹತ್ಯೆಗಳಂಥ ಹೀನ ಕೃತ್ಯಗಳಿಗೆ ಕಾರಣವಾಗುವ ಇತರ ವದಂತಿಗಳನ್ನು ಹರಡಲು ಹೆಸರಾಂತ ಜಾಗತಿಕ ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮಗಳ ವೇದಿಕೆ ಬಳಕೆಯಾಗಿದ್ದರೆ, ಅವುಗಳ ಮುಖ್ಯಸ್ಥರು ಮತ್ತು ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಕೇಂದ್ರ ಸರ್ಕಾರದ ಉನ್ನತ ಸಮಿತಿಯೊಂದು ಶಿಫಾರಸು ಮಾಡಿದೆ.

ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದ ಅಂತರ್-ಸಚಿವಾಲಯ ಸಮಿತಿ ಈ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ತನ್ನ ವರದಿ ಸಲ್ಲಿಸಿದೆ. ಇಂಟರ್‍ನೆಟ್ ವೇದಿಕೆಗಳ ಮೂಲಕ ನಕಲಿ ಸುದ್ದಿಗಳು ಮತ್ತು ವದಂತಿಗಳಿಂದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಗಲಭೆ, ಹಿಂಸಾಚಾರ ಮತ್ತು ಗುಂಪಿನ ಹತ್ಯೆ ಪ್ರಕರಣಗಳ ಬಗ್ಗೆ ಪರಾಮರ್ಶೆ ನಡೆಸುತ್ತಿರುವ ಸಚಿವರಗಳು ಸಮೂಹ(ಜಿಒಎಂ) ಮುಖ್ಯಸ್ಥರಾಗಿರುವ ರಾಜನಾಥ್ ಸಿಂಗ್ ಈ ವರದಿಯನ್ನು ಅವಲೋಕಿಸಿದ್ದಾರೆ. ನಂತರ ಈ ವರದಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನೆಯಾಗಲಿದೆ.  ಸಾಮಾಜಿಕ ಸೌಹಾರ್ದತೆ ಕದಡುವ ವದಂತಿ ಮತ್ತು ಸಂದೇಶಗಳನ್ನು ಹಬ್ಬಿಸುವುದಕ್ಕಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಬಳಕೆಯಾಗ ಬಾರದು ಎಂಬ ಉದ್ದೇಶದಿಂದ ಕಠಿಣ ಕ್ರಮ ಗಳನ್ನು ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದೆ.

ಇಂಥ ಪ್ರಕರಣಗಳಿಗೆ ಜಾಗತಿಕ ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮಗಳ ವೇದಿಕೆ ಬಳಕೆಯಾಗಿದ್ದರೆ ಅವುಗಳ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಕ್ರಿಮಿನಲ್ ಕೇಸ್‍ಗಳನ್ನು ದಾಖಲಿಸಿಕೊಳ್ಳಲು ಸಮಿತಿ ಸಲಹೆ ಮಾಡಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ.  ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ನಡೆಯುವ ಘಟನೆಗಳ ಬಗ್ಗೆ ನಿಗಾ ವಹಿಸಲು ಪ್ರತಿ ಜಿಲ್ಲೆ ಯಲ್ಲೂ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸ ಬೇಕೆಂದು ಸಹ ಸಮಿತಿ ಶಿಫಾರಸು ಮಾಡಿದೆ.

Facebook Comments

Sri Raghav

Admin