ಆದಿಚುಂಚನಗಿರಿ ಮಠದದಿಂದ “ಕೊಡಗಿಗೆ ನಮ್ಮ ಕೊಡುಗೆ” ಪಾದಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

Adichunchanagere
ಬೆಂಗಳೂರು, ಸೆ.1-ಹಿಂದೆಂದೂ ಕೇಳರಿಯದ ಮಹಾಮಳೆಯಿಂದ ಅತಿವೃಷ್ಟಿ ಉಂಟಾಗಿ ಕೊಡಗಿನಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದು, ಅವರಿಗೆ ಶಾಶ್ವತವಾದ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಕೊಡಗಿಗೆ ನಮ್ಮ ಕೊಡುಗೆ ಪಾದಯಾತ್ರೆಯನ್ನು ನಾಳೆಯಿಂದ ಹಮ್ಮಿಕೊಂಡಿದೆ.

ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿರುವ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಿಂದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಆದಿಚುಂಚನಗಿರಿ ವಿಜಯನಗರದ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮಿಜಿ ತಿಳಿಸಿದರು. ನಾಳೆ ಬೆಳಗ್ಗೆ 10 ಗಂಟೆಗೆ ಗವಿಗಂಗಾಧರೇಶ್ವರ ದೇವಾಲಯದಿಂದ ವಿಜಯನಗರದ ಮಾರುತಿ ಮಂದಿರದವರೆಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದರು.

ಪಾದಯಾತ್ರೆಯಲ್ಲಿ ಬೆಂಗಳೂರಿನ ಬೇಲಿಮಠ, ಕೊಳದ ಮಠ, ವಿಶ್ವಒಕ್ಕಲಿಗರ ಮಹಾಸಂಸ್ಥಾನಮಠ ಸೇರಿದಂತೆ ವಿವಿಧ ಮಠಗಳ ಸಾಮೀಜಿಗಳು, ಪಾದ್ರಿಗಳು, ಮೌಲ್ವಿಗಳು, ಸಾಧು,ಸಂತರು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶ್ರೀಮಠದ ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಈ ಪಾದಯಾತ್ರೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ ಎಂದರು. ಪಾದಯಾತ್ರೆಯಲ್ಲಿ ಪರಿಸರ ಜಾಗೃತಿಯನ್ನೂ ಕೂಡ ಮೂಡಿಸಲಾಗುವುದು. ಆ.25 ಮತ್ತು 26ರಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಕೊಡಗು ಜಿಲ್ಲೆಯ ಹಲವು ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಬಟ್ಟೆ, ಆಹಾರ ಸಾಮಗ್ರಿ, ಔಷಧಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳನ್ನು ನೀಡಿದ್ದಾರೆ. ಅಲ್ಲದೆ, ಆದಿಚುಂಚನಗಿರಿ ಆಸ್ಪತ್ರೆಯ ವೈದ್ಯರ ತಂಡವನ್ನೂ ಕಳುಹಿಸಿ ನೆರವಿನ ಹಸ್ತವನ್ನು ನೀಡಿದ್ದಾರೆ ಎಂದು ಹೇಳಿದರು.
ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಮನೆ ಸೇರಿದಂತೆ ಶಾಶ್ವತವಾದ ಅನುಕೂಲ ಕಲ್ಪಿಸಲು ಸ್ವಾಮೀಜಿಯವರು ಸಂಕಲ್ಪ ಮಾಡಿದ್ದು, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಗುವುದು ಎಂದು ತಿಳಿಸಿದರು.

ಸಾಹಿತಿ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ನೈಸರ್ಗಿಕ ವಿಪತ್ತು ಸಂಭವಿಸಿದಾಗಲೆಲ್ಲಾ ಆದಿಚುಂಚನಗಿರಿ ಮಠ ಸಹಾಯ ನೀಡುತ್ತಲೇ ಬಂದಿದೆ. ಕೊಡಗಿನಲ್ಲಿ ಇಂತಹ ಅನಾಹುತ ಸಂಭವಿಸಿದ್ದು, ತಕ್ಷಣವೇ ವೈದ್ಯಕೀಯ ಹಾಗೂ ಇತರೆ ನೆರವನ್ನು ನೀಡಿದೆ. ನಾಳೆ ಗೋವಿಂದರಾಜನಗರ, ಮತ್ತು ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಲಾಗುವುದು. ನಂತರ ಮಹಾಲಕ್ಷ್ಮಿಲೇಔಟ್, ಮಲ್ಲೇಶ್ವರ ಸೇರಿದಂತೆ ಇತರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಇದೇ ರೀತಿ ಕೊಡಗಿಗಾಗಿ ನಮ್ಮ ಕೊಡುಗೆ ಪಾದಯಾತ್ರೆ ನಡೆಸಲಾಗುವುದು. ಅಲ್ಲದೆ ಆದಿಚುಂಚನಗಿರಿ ಮಠ ಶಾಖೆ ಇರುವ ಕಡೆಗಳಲ್ಲೂ ಪಾದಯಾತ್ರೆ ನಡೆಸಿ ಕೊಡಗಿನ ನೆರವಿಗೆ ಜನರು ಕೈಜೋಡಿಸುವಂತೆ ಮನವಿ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಂಜನೇಯರೆಡ್ಡಿ, ರಂಗಣ್ಣ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Facebook Comments

Sri Raghav

Admin