ನಂದಮೂರಿ ಹರಿಕೃಷ್ಣ ಅವರ ಮೃತದೇಹದ ಜೊತೆ ಸೆಲ್ಫಿ ತೆಗೆದುಕೊಂಡ ನರ್ಸ್’ಗಳ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Selfie--01

ಹೈದರಾಬಾದ್,ಸೆ.1- ಮೂರು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ತೆಲುಗು ಚಿತ್ರ ನಟ ನಂದಮುರಿ ಹರಿಕೃಷ್ಣ ಅವರ ಮೃತ ದೇಹದ ಪಕ್ಕ ಸೆಲ್ಫಿ ತೆಗೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ನಾಲ್ಕು ಜನ ನರ್ಸ್‍ಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ.  ಆ.29ರಂದು ನಂದಮುರಿ ಹರಿಕೃಷ್ಣ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಮರಣೋತ್ತರ ಪರೀಕ್ಷೆಗಾಗಿ ನಲಗೊಂಡ ಜಿಲ್ಲೆಯ ನರ್ಕಿಟ್‍ಪಲ್ಲಿಯಲ್ಲಿರುವ ಕಾಮಿನೇನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು.

ಈ ವೇಳೆ ಆಸ್ಪತ್ರೆಯಲ್ಲಿದ್ದ ನರ್ಸ್‍ಗಳು ಮರಣೋತ್ತರ ಪರೀಕ್ಷೆ ನಡೆಸುವ ಬದಲು ಮೃತದೇಹದ ಪಕ್ಕ ನಿಂತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿತ್ತು.  ಇದನ್ನು ಗಂಭೀರವಾಗಿ ಪರಿಗಣಿಸಿದ ಆಸ್ಪತ್ರೆಯ ಆಡಳಿತ ಮಂಡಳಿ ಮೂವರು ಮಹಿಳಾ ನರ್ಸ್ ಹಾಗೂ ಓರ್ವ ಪುರುಷ ಸೇರಿದಂತೆ ನಾಲ್ವರನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಿದ್ದಾರೆ. ನರ್ಸ್‍ಗಳ ಈ ಘನ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಕೂಡಲೇ ಆಡಳಿತ ಮಂಡಳಿ ನಾಲ್ವರನ್ನು ಕೆಲಸದಿಂದಲೇ ವಜಾಗೊಳಿಸಿದೆ.

ಇದು ಅತ್ಯಂತ ದುರಷ್ಟಕರ ಘಟನೆ. ನಮ್ಮ ಸಿಬ್ಬಂದಿ ಮಾಡಿರುವ ಅಚಾತುರ್ಯಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಇದೊಂದು ಅಮಾನವೀಯ ಘಟನೆಯಾಗಿರುವುದರಿಂದ ತಕ್ಷಣವೇ ಅವರನ್ನು ಕೆಲಸದಿಂದ ವಜಾ ಮಾಡಿದ್ದೇವೆ. ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಕಾಮಿನೇನಿ ಆಸ್ಪತ್ರೆಯ ವಕ್ತಾರ ವೆಂಕಟ್ ಭಾರದ್ವಾಜ್ ಹೇಳಿದ್ದಾರೆ.

ಹರಿಕೃಷ್ಣ ಸಂಬಂಧಿಕರು ಮತ್ತು ಅವರ ಬೆಂಬಲಿಗರಲ್ಲಿ ನಾವು ಹೃದಯ ಪೂರ್ವಕವಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ನಾವು ಈ ಘಟನೆಯನ್ನು ಖಂಡಿಸುವುದಲ್ಲದೆ ಇಂಥ ನಡೆವಳಿಕೆಗಳು ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.  ಆಸ್ಪತ್ರೆಯಲ್ಲಿರುವ ಸಿಬ್ಬಂದಿ ಮೊದಲು ಮನುಷ್ಯತ್ವಕ್ಕೆ ಬೆಲೆ ಕೊಡುತ್ತದೆ. ನಮ್ಮಿಂದ ಯಾವುದೇ ರೀತಿಯ ತೊಂದರೆಯಾಗಿದ್ದಾರೆ ಮತ್ತೊಮ್ಮೆ ಹರಿಕೃಷ್ಣ ಕುಟುಂಬದವರಲ್ಲಿ ಕಳಕಳಿಯಿಂದ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.

Facebook Comments

Sri Raghav

Admin