ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ವಂಚಿತ ಫಲಾನುಭವಿಗಳಿಗೆ ಮತ್ತೊಂದು ಚಾನ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

Houseing-UT-Khadre

ಬೆಂಗಳೂರು, ಸೆ.1-ರಾಜೀವ್‍ಗಾಂಧಿ ವಸತಿ ನಿಗಮದಲ್ಲಿ ವಿವಿಧ ತಾಂತ್ರಿಕ ಕಾರಣಗಳಿಗಾಗಿ ಸೌಲಭ್ಯ ವಂಚಿತ 69ಸಾವಿರ ಫಲಾನುಭವಿ ಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ ಎಂದು ವಸತಿ ಹಾಗೂ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಹೇಳಿದರು. ನಗರದ ಕಾವೇರಿ ಭವನದಲ್ಲಿರುವ ರಾಜೀವ್ ಗಾಂಧಿ ವಸತಿ ನಿಗಮದ ಸ್ಪಂದನಾ ಸಹಾಯ ವಾಣಿಯನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮನೆಗಳು ಮಂಜೂರಾಗಿದ್ದವು. ಕೆಲವಕ್ಕೆ ಮೊದಲ ಕಂತಿನ ಅನುದಾನ ಬಿಡುಗಡೆಯಾಗಿತ್ತು. ಇನ್ನೂ ಕೆಲವಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಕೆಲವರು ತಳಪಾಯ ಹಾಕಿದ್ದಾರೆ. ಅನಂತರ ವಿವಿಧ ತಾಂತ್ರಿಕ ಕಾರಣಗಳನ್ನು ನೀಡಿ ಮಂಜೂರಾಗಿದ್ದ ಮನೆಯನ್ನು ರದ್ದುಗೊಳಿಸಲಾಗಿದೆ. ಈ ರೀತಿ 69 ಸಾವಿರ ಫಲಾನುಭವಿಗಳು ಸೌಲಭ್ಯವಂಚಿತರಾಗಿದ್ದಾರೆ. ಅವರಿಗೆ ಮತ್ತೊಮ್ಮೆ ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಸೆ.5ರಿಂದ 25ರವರೆಗೆ ಕಾಲಾವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.

ಮಂಜೂರಾಗಿದ್ದ ಮನೆಗಳು ರದ್ದಾಗಲು ಹಲವಾರು ತಾಂತ್ರಿಕ ಕಾರಣಗಳಿವೆ. ಅವುಗಳನ್ನು ಒಂದೊಂದಾಗಿ ಇಲಾಖೆ ಬಗೆಹರಿ ಸುತ್ತಿದೆ. ಈ ಹಿಂದೆ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್)ಕುಟುಂಬಗಳ ಆದಾಯ ಮಿತಿಯನ್ನು ಸರ್ಕಾರ 32 ಸಾವಿರ ಎಂದು ನಿಗದಿ ಮಾಡಿತ್ತು. ವಸತಿ ಇಲಾಖೆ ಅದೇ ಆದಾಯ ಮಿತಿ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿತ್ತು.  ಇತ್ತೀಚೆಗೆ ಸರ್ಕಾರ ಬಿಪಿಎಲ್ ಆದಾಯ ಮೀತಿಯನ್ನು 1.20ಲಕ್ಷ ರೂ.ಗೆ ಹೆಚ್ಚಿಸಿದೆ. ಆದರೆ, ವಸತಿ ಯೋಜನೆಯ ಫಲಾನುಭವಿಗಳ ಆದಾಯ ಮಿತಿಯನ್ನು ಬಿಪಿಎಲ್ ಆದಾಯ ಮಿತಿಗೆ ಏರಿಕೆ ಮಾಡಿಲ್ಲ. 32ಸಾವಿರ ಆದಾಯ ಇರುವ ಫಲಾನುಭವಿಗಳು ಶೇ.10ರಷ್ಟು ಮಾತ್ರ ಸಿಗುತ್ತಾರೆ. ಉಳಿದ ಶೇ.90ರಷ್ಟು ಮಂದಿ ಸೌಲಭ್ಯ ವಂಚಿತರಾಗುತ್ತಿದ್ದಾರೆ. ಹೀಗಾಗಿ ವಸತಿ ಯೋಜನೆಗಳ ಫಲಾನುಭವಿಗಳ ಆದಾಯ ಮಿತಿಯನ್ನು ಬಿಪಿಎಲ್‍ಗೆ ಅನುಗುಣವಾಗಿ 1.20 ಲಕ್ಷಕ್ಕೆ ಹೆಚ್ಚಿಸುವಂತೆ ಆರ್ಥಿಕ ಇಲಾಖೆ ಮತ್ತು ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರ ವಸತಿ ಯೋಜನೆಗಳಿಗೆ ಆಧಾರ್ ನಂಬರ್ ಜೋಡಣೆ ಮಾಡುತ್ತಿದೆ. ಇಲಾಖೆಯಲ್ಲಿ ಕಚ್ಛಾ, ಪಕ್ಕ ಯೋಜನೆಯಿದ್ದು, ಅದರಡಿ ಮನೆ ದುರಸ್ತಿಗೆ 15 ಸಾವಿರ ರೂ. ಅನುದಾನ ನೀಡಲಾಗುತ್ತಿದೆ. ಈ ಸೌಲಭ್ಯ ಪಡೆದವರ ಆಧಾರ್ ಸಂಖ್ಯೆಯು ಇಲಾಖೆಯಲ್ಲಿ ನಮೂದಾಗಿದೆ. ಅಂತಹ ಫಲಾನುಭವಿಗಳಿಗೆ ಹೊಸ ಮನೆಗಳನ್ನು ಮಂಜೂರು ಮಾಡುವಾಗ ಈ ಹಿಂದೆ ಸೌಲಭ್ಯ ಪಡೆಯಲಾಗಿದೆ ಎಂಬ ಕಾರಣಕ್ಕಾಗಿ ಅವರ ಹೆಸರು ಬ್ಲಾಕ್ ಆಗಿವೆ. ರಾಜೀವ್‍ಗಾಂಧಿ ವಸತಿ ನಿಗಮದ ಮುಂದಿನ ಕಾರ್ಯಕಾರಿ ಮಂಡಳಿ ಸಮಿತಿಯಲ್ಲಿ ಹೊಸ ನಿರ್ಣಯ ತೆಗೆದುಕೊಂಡು ಕಚ್ಛಾ, ಪಕ್ಕಾ ಯೋಜನೆಯ ಫಲಾನುಭವಿಗಳಿಗೂ ಹೊಸ ಮನೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು. 1994ರಿಂದ 97ರವರೆಗೆ ಆಶ್ರಯ ಯೋಜನೆಯ ಸೌಲಭ್ಯ ಪಡೆದಿರುವವರಿಗೆ ಮತ್ತೆ ಹೊಸದಾಗಿ ಮನೆಗಳನ್ನು ಮಂಜೂರು ಮಾಡುವ ಅವಕಾಶವಿಲ್ಲ. ಆ ಸಂದರ್ಭದಲ್ಲಿ ಮನೆ ನಿರ್ಮಾಣಕ್ಕೆ 25ಸಾವಿರ ನೀಡಲಾಗುತ್ತಿತ್ತು. ಬಹುತೇಕ ಆಗ ನಿರ್ಮಿಸಲಾದ ಮನೆಗಳು ಈಗ ಶೀತಲಾವಸ್ಥೆಯಲ್ಲಿವೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೊಸ ಮನೆ ನಿರ್ಮಿಸಿ ಕೊಡುವ ಅಗತ್ಯವಿದೆ. ಹೀಗಾಗಿ 2011 ಕ್ಕಿಂತಲೂ ಹಿಂದೆ ಆಶ್ರಯ ಯೋಜನೆ ಯನ್ನು ಪಡೆದಿದ್ದವರಿಗೆ ಮತ್ತೆ ಮನೆ ಮಂಜೂರು ಮಾಡಲು ಚಿಂತನೆ ನಡೆ ದಿದೆ ಎಂದು ಖಾದರ್ ತಿಳಿಸಿದರು.

ರಾಜೀವ್‍ಗಾಂಧಿ ವಸತಿ ನಿಗಮ ವತಿಯಿಂದ ಈವರೆಗೂ 40 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಅದರ ಎಲ್ಲಾ ದತ್ತಾಂಶಗಳನ್ನು ಕಂಪ್ಯೂಟರೀ ಕರಣಗೊಳಿಸಲಾಗುವುದು. ಈಗಾಗಲೇ 6 ಲಕ್ಷ ಮನೆಗಳ ದತ್ತಾಂಶ ಕಂಪ್ಯೂಟರೀಕರಣಗೊಂಡಿದೆ. ಯೋಜನೆ ಫಲಾನುಭವಿಗಳ ಕೋಡನ್ನು ದಾಖಲಿಸಿದರೆ ಆ ಮನೆಯ ಸ್ಥಿತಿಗತಿ ಮತ್ತು ಫಲಾನುಭವಿಗಳ ಸಂಪೂರ್ಣ ವಿವರ ಗೋಚರಿಸುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು. ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದ ಐದು ವರ್ಷದ ಆಡಳಿತಾವಧಿಯಲ್ಲಿ 15 ಲಕ್ಷ ಮನೆ ನಿರ್ಮಾಣದ ಗುರಿ ಇತ್ತು. ಸುಮಾರು 14.40ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಹೊಸ ಸರ್ಕಾರದಲ್ಲಿ 20 ಲಕ್ಷ ಮನೆ ನಿರ್ಮಿಸುವ ಗುರಿ ಇದೆ. ಈ ವರ್ಷ 4 ಲಕ್ಷ ಮನೆ ನಿರ್ಮಿಸಬೇಕಿದೆ. ಹಿಂದೆ ಬಾಕಿ ಉಳಿದಿರುವ 60ಸಾವಿರ ಮನೆಗಳನ್ನೂ 20 ಲಕ್ಷದ ಜತೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೊಡಗು ಸಂತ್ರಸ್ತರಿಗೆ ಮನೆ ಬಾಡಿಗೆ:ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಮನೆ ಕಳೆದುಕೊಂಡವರ ಪುನರ್ವಸತಿಗೆ ಎರಡು ರೀತಿಯ ಯೋಜನೆಗಳನ್ನು ಸಿದ್ದಪಡಿಸಲಾಗಿದೆ. ಒಂದು ಖಾಯಂ ಮನೆಗಳನ್ನು ನಿರ್ಮಿಸುವುದು. ಅದಕ್ಕಾಗಿ ಜಿಲ್ಲಾಡಳಿತ 42 ಎಕರೆ ಭೂಮಿಯನ್ನು ಗುರುತಿಸಿ. ಅದರಲ್ಲಿ 24 ಎಕರೆ ಭೂಮಿಯ ದಾಖಲೆಗಳನ್ನು ವಸತಿ ಇಲಾಖೆಗೆ ಈಗಾಗಲೇ ನೀಡಿದೆ. ಕೆಲವರ ಮನೆಗಳು ಕೊಚ್ಚಿ ಹೋಗಿದ್ದು, ನಿವೇಶನ ಸುಸ್ಥಿತಿಯಲ್ಲಿದೆ. ಅಂತಹ ಜಾಗದಲ್ಲಿ ಮನೆ ನಿರ್ಮಿಸಲು ಅನುವು ಮಾಡಲಾಗುವುದು. ಕೆಲವು ಜಾಗಗಳಲ್ಲಿ ಮನೆ ನಿರ್ಮಿಸಲು ಸಾಧ್ಯವಾಗದಂತೆ ನಿವೇಶನವೂ ಕೊಚ್ಚಿ ಹೋಗಿದೆ. ಅವರಿಗೆ ನಿವೇಶನದ ಜತೆ ಮನೆ ನಿರ್ಮಿಸಿಕೊಡುವ ಯೋಜನೆ ಇದೆ ಎಂದು ಹೇಳಿದರು.

ನಿರ್ವಸತಿಗರಿಗೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಡುವ ಪ್ರಸ್ತಾವನೆ ಇದೆ. ಆದರೆ, ತಾತ್ಕಾಲಿಕ ಶೆಡ್‍ಗಳ ನಿರ್ಮಾಣ ಖರ್ಚು, ವಿದ್ಯುದ್ದೀಕರಣ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಲೇಬೇಕು. ಖಾಯಂ ಮನೆ ನಿರ್ಮಿಸಿದಾಗ ಈ ಸೌಲಭ್ಯಗಳಿಗೆ ಮಾಡಿದ ಖರ್ಚು ವ್ಯರ್ಥವಾಗುತ್ತದೆ. ಹಾಗಾಗಿ ತಾತ್ಕಾಲಿಕ ಶೆಡ್‍ಗಳ ಬದಲಾಗಿ ಮನೆ ಕಳೆದುಕೊಂಡವರಿಗೆ ತಿಂಗಳಿಗೆ ಮನೆ ಬಾಡಿಗೆ ನೀಡುವ ಚಿಂತನೆ ಇದೆ. ಗರಿಷ್ಠ ಒಂದು ವರ್ಷದವರೆಗೂ ಮನೆ ಬಾಡಿಗೆ ಕೊಟ್ಟು ಅಷ್ಟರಲ್ಲಿ ಹೊಸದಾಗಿ ಖಾಯಂ ಮನೆಗಳನ್ನು ನಿರ್ಮಿಸಿಕೊಡುವುದು ಸೂಕ್ತ ಎಂದು ಮುಖ್ಯಮಂತ್ರಿಯವರಿಗೆ ನಮ್ಮ ಇಲಾಖೆ ಸಲಹೆ ನೀಡಿದೆ ಎಂದು ಖಾದರ್ ತಿಳಿಸಿದರು. ರಾಜೀವ್‍ಗಾಂಧಿ ವಸತಿ ನಿಗಮದ ಮಾದರಿಯಲ್ಲೇ ಗೃಹ ಮಂಡಳಿಯಲ್ಲೂ ಹೊಸದಾಗಿ ಸಹಾಯವಾಣಿ ಆರಂಭಿಸುವುದಾಗಿ ಇದೇ ವೇಳೆ ತಿಳಿಸಿದರು.

Facebook Comments

Sri Raghav

Admin